Advertisement

15 ದಿನದಲ್ಲಿ ಅರ್ಜಿ ಇತ್ಯರ್ಥಪಡಿಸಿ

05:01 PM Dec 06, 2018 | Team Udayavani |

ಮೊಳಕಾಲ್ಮೂರು: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರೊಂದಿಗೆ ಬೆರೆತು ಕೆಲಸ ಮಾಡಿದರೆ ಸಕಾಲದಲ್ಲಿ ಜನರ ಕುಂದುಕೊರತೆ ನಿವಾರಿಸಲು ಸಾಧ್ಯ ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಅಭಿಪ್ರಾಯ ಪಟ್ಟರು. ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಬುಧವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿವೆ. ಯೋಜನೆಗಳು ಹಾಗೂ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆದರೆ ಇಂತಹ ಯೋಜನೆಗಳನ್ನು ತಲುಪಿಸುವಾಗ ಜನರನ್ನು ಅಲೆದಾಡಿಸಬಾರದು. ಅಧಿಕಾರಿಗಳು ಕೂಡ ಓದುವಾಗ ತುಂಬಾ ಬಡತನ ಹಾಗೂ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಆದರೆ ಸರ್ಕಾರಿ ಸೇವೆಗೆ ಸೇರಿದ ನಂತರ ಹಿಂದಿನ ಬಡತನ, ಜನರಿಗಾಗುವ ಸಂಕಷ್ಟಗಳನ್ನು ಮರೆತು ಸಂಬಂಧವೇ ಇಲ್ಲವೆಂಬ ರೀತಿಯಲ್ಲಿ ವರ್ತಿಸುತ್ತಾರೆ. ಇಂತಹ ಭಾವನೆ ಅಧಿಕಾರಿಗಳು ಸೇರಿದಂತೆ ಯಾವುದೇ ಸಿಬ್ಬಂದಿಗೆ ಬರಬಾರದು ಎಂದರು.

ಜನಸಂಪರ್ಕ ಸಭೆಯಲ್ಲಿ ಸ್ವೀಕರಿಸಲಾಗುವ ಅರ್ಜಿಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸಲಾಗುವುದು. ರೈತರು ಸಂಕಷ್ಟದಲ್ಲಿದ್ದು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಾನು ಗ್ರಾಮ ವಾಸ್ತವ್ಯ ಮಾಡದೆ ಬೆಳಿಗ್ಗೆಯಿಂದ ಸಂಜೆಯವರೆಗೆ ಜನರೊಂದಿಗೆ ಇದ್ದು ಅವರ ಸಮಸ್ಯೆಗಳನ್ನು ಆಲಿಸಿ ನಿವಾರಿಸಲು ಕ್ರಮ ಕೈಗೊಳ್ಳುತೇನೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ. ಶ್ರೀರಾಮುಲು ಮಾತನಾಡಿ, ಮೊಳಕಾಲ್ಮುರು ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದು ತುಂಗಭದ್ರಾ ಹಿನ್ನೀರು ಯೋಜನೆಯಿಂದ ನೀರು ಪೂರೈಕೆ ಮಾಡಲಾಗುವುದು. ಫಸಲ್‌ ಬಿಮಾ ಯೋಜನೆಯಡಿ ಸರಿಯಾಗಿ ಪರಿಹಾರ ಸಿಕ್ಕಿಲ್ಲ ಎಂದು ರೈತರು ತಿಳಿಸಿದ್ದು ಆ ಬಗ್ಗೆ ಕ್ರಮ ಜರುಗಿಸಲಾಗುತ್ತದೆ.

ಬಗರ್‌ಹುಕುಂ ಅಡಿ ಭೂಮಿಯನ್ನು ಮಂಜೂರಾತಿ ಮಾಡಿಲ್ಲವೆಂದು ಜನರ ಬೇಡಿಕೆಯಾಗಿದ್ದು 2019 ರ ಮಾರ್ಚ್‌ 15 ರವರೆಗೆ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶ ಇದೆ. ಯಾರು ಅರ್ಜಿ ಸಲ್ಲಿಸಿಲ್ಲವೋ ಅಂತಹ ಫಲಾನುಭವಿಗಳು ತಪ್ಪದೇ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.

Advertisement

ರಂಗಯ್ಯನದುರ್ಗ ಜಲಾಶಯದ ನಿರ್ಮಾಣದಿಂದ ಸಂತ್ರಸ್ತರಾದವರಿಗೆ ಪರಿಹಾರ ದೊರೆತಿಲ್ಲ. 2009 ರಲ್ಲಿ ಹಳ್ಳದಲ್ಲಿ ಕೊಚ್ಚಿ ಹೋದವರಿಗೆ ಪರಿಹಾರ, ಬುಕ್ಕನಹಳ್ಳಿ ಕಲ್ಲು ಗಣಿಗಾರಿಕೆ ತಡೆ ಸೇರಿದಂತೆ ವಿವಿಧ ರಸ್ತೆ ನಿರ್ಮಾಣ, ಅಭಿವೃದ್ಧಿ,  ಚೆಕ್‌ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಕೆಲವು ವಿಷಯಗಳನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಂಪರ್ಕ ಸಭೆಯಲ್ಲಿ ಸ್ವೀಕರಿಸಲಾ ಗುವ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಆಯಾ ಇಲಾಖೆಗಳಿಗೆ ಕಳುಹಿಸಿ ಕೊಡಲಾಗುತ್ತದೆ. ಆಯಾ ಇಲಾಖೆ ಗಳಿಂದ 15 ದಿನಗಳಲ್ಲಿ ಪರಿಶೀಲಿಸಿ ಇತ್ಯರ್ಥ ಮಾಡಲಾಗುತ್ತದೆ ಎಂದರು.

ಜನಸಂಪರ್ಕ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ಜಿಪಂ ಸದಸ್ಯರಾದ ಮುಂಡರಗಿ ನಾಗರಾಜ್‌, ಡಾ| ಬಿ. ಯೋಗೇಶ್‌ ಬಾಬು, ತಾಲೂಕು ಪಂಚಾಯತ್‌ ಅಧ್ಯಕ್ಷೆ ಲತಮ್ಮ, ಉಪಾಧ್ಯಕ್ಷೆ ತಿಮ್ಮಕ್ಕ, ಪಟ್ಟಣ ಪಂಚಾಯತ್‌ ಅಧ್ಯಕ್ಷ ಪ್ರಕಾಶ್‌, ಜಿಪಂ ಸಿಇಒ ಪಿ.ಎನ್‌. ರವೀಂದ್ರ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಮುಖಂಡರು ಭಾಗವಹಿಸಿದ್ದರು. ವಸತಿ, ಶಿಕ್ಷಣ, ನಿವೇಶನ ಸೇರಿದಂತೆ 206 ಅರ್ಜಿಗಳು ಜನರಿಂದ ಸಲ್ಲಿಕೆಯಾದವು. 

Advertisement

Udayavani is now on Telegram. Click here to join our channel and stay updated with the latest news.

Next