ಹುಣಸೂರು: ಅಂಬೇಡ್ಕರ್ ಸಮುದಾಯದ ಭನವದ ಹತ್ತಿರ ಅಳವಡಿಸಿದ್ದ ಅಂಬೇಡ್ಕರ್ ಯುವಕ ಸಂಘದ ನಾಮಫಲಕವನ್ನು ತಾಲೂಕು ಆಡಳಿತವೇ ಮುಂದೆ ನಿಂತು ತೆರವುಗೊಳಿಸಿ, ಅಂಬೇಡ್ಕರ್ ಅವರಿಗೆ ಅವಮಾನಮಾಡಿದ್ದು, ಪ್ರಶ್ನಿಸಲು ಹೋದ ದಲಿತ ಮುಖಂಡರಿಗೂ ನಿಂದಿಸಿದ್ದಾರೆಂದು ಆರೋಪಿಸಿ ದಲಿತ ಮುಖಂಡರು ವೃತ್ತ ನಿರೀಕ್ಷಕ ಧರ್ಮೇಂದ್ರರಿಗೆ ಮನವಿ ಸಲ್ಲಿಸಿದರು.
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಹಳೇಪುರ ಗ್ರಾಮದಲ್ಲಿನ ಅಂಬೇಡ್ಕರ್ ಭವನ ನಿರ್ಮಿಸಲು ಉದ್ದೇಶಿಸಿದ್ದ ಜಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸುವ ಸಲುವಾಗಿ ಯುವಕ ಸಂಘ ಹಾಕಿದ್ದ ನಾಮಫಲಕವನ್ನು ತಹಸೀಲ್ದಾರ್ ಮೋಹನ್, ತಾ.ಪಂ ಇ.ಒ ಕೃಷ್ಣಕುಮಾರ್, ಸಿಡಿಪಿಒ ನವೀನ್‌ಕುಮಾರ್ ಹಾಗೂ ಎಸ್.ಐ ನವೀನ್‌ಕುಮಾರ್ ರವರುಗಳ ಸಮ್ಮುಖದಲ್ಲಿ ಕಿತ್ತುಹಾಕಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ಅಧಿಕಾರಿಗಳು ಬೆಲೆ ಕೊಡದೆ ಕೇವಲವಾಗಿ ಮಾತನಾಡಿದ್ದಾರೆ ಅಲ್ಲದೆ ನಿಂದಿಸಿ- ಅವಮಾನಿಸಿದ್ದಾರೆಂದು ಗ್ರಾಮದ ಅಂಬೇಡ್ಕರ್ ಯುವಕ ಸಂಘ ಆರೋಪಿಸಿದ್ದು, ಗ್ರಾಮದ ಯಜಮಾನ ದುಂಡಯ್ಯ ಅಧಿಕಾರಿಗಳ ವಿರುದ್ಧ ಎ.ಎಸ್.ಪಿಯವರಿಗೆ ದೂರು ಸಲ್ಲಿಸಿದ್ದಾರೆ.
ಜಿಲ್ಲಾದ್ಯಂತ ಪ್ರತಿಭಟನೆ ಎಚ್ಚರಿಕೆ: ಡಿ.ವೈ.ಎಸ್.ಪಿ ಕಚೇರಿ ಎದುರು ಜಮಾವಣೆಗೊಂಡಿದ್ದ ಹಳೇಪುರದ ದಲಿತರು ಹಾಗೂ ದಲಿತ ಮುಖಂಡರು ಘಟನೆಗೆ ಸಂಬಂಧಿಸಿದಂತೆ ವೃತ್ತ ನಿರೀಕ್ಷಕರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ದಲಿತ ಮುಖಂಡರಾದ ಹರಿಹರ ಆನಂದಸ್ವಾಮಿ,
ನಿಂಗರಾಜಮಲ್ಲಾಡಿ, ರತ್ನಪುರಿ ಪುಟ್ಟಸ್ವಾಮಿರವರುಗಳು ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಗಳೇ ಅಂಬೇಡ್ಕರ್‌ರಿಗೆ ಅವಮಾನ ಮಾಡಿದ್ದು, ತೆರವುಗೊಳಿಸಿರುವ ನಾಮಫಲಕವನ್ನು ಇನ್ನೆರಡು ದಿನದಲ್ಲಿ ಮತ್ತೆ ಅಳವಡಿಸದಿದ್ದಲ್ಲಿ ಎಲ್ಲಾ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸುವ ಹಾಗೂ ತಾಲೂಕು ಕೇಂದ್ರ ಹಾಗೂ ಜಿಲ್ಲಾಧಿಕಾರಿ, ಎಸ್.ಪಿ ಕಚೇರಿ ಮುಂದೆ ಪ್ರತಿಭಟಿಸುವುದಾಗಿ ತಿಳಿಸಿದರು.