ನವದೆಹಲಿ: ಸೇನೆಗೆ ಮಹಿಳಾ ಜವಾನರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆ ಇರಿಸಿರುವ ಭಾರತೀಯ ಸೇನೆಯು ಈ ನೇಮಕಾತಿಗಾಗಿ ಆನ್ ಲೈನ್ ನೋಂದಣಿ ಮೂಲಕ ಅರ್ಜಿ ಸಲ್ಲಿಸಲು ಗುರುವಾರ ಸಾರ್ವಜನಿಕ ಪ್ರಕಟನೆಯನ್ನು ಹೊರಡಿಸಿದೆ. ಹೊಸದಾಗಿ ನೆಮಕಗೊಳ್ಳಲಿರುವ ಮಹಿಳಾ ಜವಾನರು ಸದ್ಯಕ್ಕೆ ಸಾಮಾನ್ಯ ಕರ್ತವ್ಯ ನಿರ್ವಹಣೆಯ ಪಾತ್ರವನ್ನು ನಿಭಾಯಿಸಲಿದ್ದಾರೆ.
ಸದ್ಯಕ್ಕೆ 100 ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗಳಿಗೆ ಮಾತ್ರವೇ ನೇಮಕಾತಿ ನಡೆಯಲಿದೆ. ಇದಕ್ಕಾಗಿ ಆನ್ ಲೈನ್ ನೋಂದಣಿ ಕಡ್ಡಾಯವಾಗಿರಲಿದೆ ಹಾಗೂ ಆಸಕ್ತರು ಎಪ್ರಿಲ್ 25ರಿಂದ ಜೂನ್ 8ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿಯನ್ನು 21 ವರ್ಷಗಳಿಗೆ ಸೀಮಿತಗೊಳಿಸಲಾಗಿದೆ. ಮತ್ತು ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗೆ ಅರ್ಜಿ ಸಲ್ಲಿಸಬೇಕೆಂದಿದ್ದರೆ ನಿಮಗೆ ಕನಿಷ್ಠ ಹದಿನೇಳೂವರೆ ವರ್ಷ ಪ್ರಾಯವಾಗಿರಬೇಕು. ಆದರೆ ತಮ್ಮ ಕರ್ತವ್ಯದಲ್ಲಿ ಪ್ರಾಣತ್ಯಾಗ ಮಾಡಿದ ಭದ್ರತಾ ಸಿಬ್ಬಂದಿಗಳ ಪತ್ನಿಯರಿಗೆ ಗರಿಷ್ಠ ಪ್ರಾಯಮಿತಿಯನ್ನು 30 ವರ್ಷಗಳೆಂದು ನಿಗದಿಪಡಿಸಲಾಗಿದೆ.
ಅಂಬಾಲ, ಲಕ್ನೋ, ಜಬಲ್ಪುರ, ಬೆಂಗಳೂರು ಮತ್ತು ಶಿಲ್ಲಾಂಗ್ ಗಳಲ್ಲಿ ನೇಮಕಾತಿ ಶಿಬಿರಗಳನ್ನು ಆಯೋಜಿಸಲಾಗಿದೆ. ನೇಮಕಾತಿ ಶಿಬಿರಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳಿಗೆ ನೋಂದಣಿ ಕಾರ್ಡ್‌ಗಳನ್ನು ಅಭ್ಯರ್ಥಿಗಳ ನೋಂದಾಯಿತ ಇ-ಮೇಲ್ ಗಳಿಗೆ ಕಳುಹಿಸಲಾಗುವುದು. ಲಿಖೀತ ಪರೀಕ್ಷೆಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆಗಳ (ಸಿಇಇ) ಮೂಲಕ ನಡೆಸಲಾಗುತ್ತದೆ.
ಆಯ್ದ ಅಭ್ಯರ್ಥಿಗಳು ನೇಮಕಾತಿ ಶಿಬಿರದ ಸಂದರ್ಭದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾಗಿರುತ್ತದೆ. ವೈದ್ಯಕೀಯ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿಯು ಲಿಂಗಪರಿವರ್ತನೆಗೆ ಒಳಗಾಗಿದ್ದು ಕಂಡುಬಂದಲ್ಲಿ ಮತ್ತು ಗರ್ಭಿಣಿಯರಾಗಿದ್ದಲ್ಲಿ ಅಂತವರನ್ನು ಅನರ್ಹಗೊಳಿಸಲಾಗುವುದು ಮತ್ತು ಅವರ ಅಭ್ಯರ್ಥಿತನವನ್ನು ತಿರಸ್ಕರಿಸಲಾಗುವುದು.
ಲಿಖಿತ ಪರೀಕ್ಷೆಯ ಫಲಿತಾಂಶಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.