Advertisement
ಪದವೀಧರ ಪ್ರಾಥಮಿಕ ಶಾಲಾ (6-8ನೇ ತರಗತಿ) ಶಿಕ್ಷಕರ ನೇಮಕಾತಿಗಾಗಿ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಮೇ 21 ಮತ್ತು 22ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಸಿಇಟಿ ಪರೀಕ್ಷೆ ನಡೆಸುವ ಸಂಬಂಧ ಮಾ. 21ರಂದು ವೇಳಾಪಟ್ಟಿ ಪ್ರಕಟಿಸಲಿದ್ದು, ಮಾ. 23ರಿಂದ ಎ. 22ರ ವರೆಗೆ ಒಂದು ತಿಂಗಳ ಕಾಲ ಅರ್ಜಿ ಸಲ್ಲಿಸಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
Related Articles
Advertisement
ಸಿಇಟಿಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಗಳು ಮೂರು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಪತ್ರಿಕೆ-1 ಸಾಮಾನ್ಯ ಜ್ಞಾನ 150 ಅಂಕಗಳಿರಲಿದ್ದು, ಬಹು ಆಯ್ಕೆ ಮಾದರಿಯಲ್ಲಿರುತ್ತದೆ. ಈ ಪರೀಕ್ಷೆಯಲ್ಲಿ ಯಾವುದೇ ಕನಿಷ್ಠ ಅರ್ಹತೆ ಪಡೆಯುವ ಅಗತ್ಯವಿಲ್ಲ. ಆದರೆ, ಒಟ್ಟಾರೆ ಅಂಕಗಳನ್ನು ಪರಿಗಣಿಸಲಾಗುತ್ತದೆ. ಪತ್ರಿಕೆ-2 ಅಭ್ಯರ್ಥಿಗಳು ಬೋಧಿಸುವ ವಿಷಯಗಳ ಐಚ್ಛಿಕ ವಿಷಯಗಳಾಗಿರುತ್ತವೆ. 150 ಅಂಕಗಳಿಗೆ ಪರೀಕ್ಷೆ ಇರುತ್ತದೆ. ಪತ್ರಿಕೆ-3 ಆಯಾ ಭಾಷಾ ಮಾಧ್ಯಮಗಳು (ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲಗು, ಉರ್ದು) 100 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದರು.
ತೃತೀಯ ಲಿಂಗಿಗಳಿಗೂ ಅವಕಾಶ :
ಈ ಬಾರಿಗೆ ಮಾತ್ರ ಅನ್ವಯವಾಗುವಂತೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ತಲಾ 2 ವರ್ಷಗಳ ವಯೋಮಿತಿ ಸಡಿಲಿಸಲಾಗಿದೆ. ಇದೇ ಮೊದಲ ಬಾರಿಗೆ ಶೇ. 1ರಷ್ಟು ಹುದ್ದೆಗಳನ್ನು ತೃತೀಯ ಲಿಂಗಿಗಳಿಗೆ ಮೀಸಲಿಡಲಾಗಿದೆ.
30 ಸಾವಿರ ಖಾಲಿ ಹುದ್ದೆ :
ಪ್ರಾಥಮಿಕ ಶಾಲೆಗಳಲ್ಲಿ (1-8ನೇ ತರಗತಿ) ಸುಮಾರು 30 ಸಾವಿರಕ್ಕಿಂತ ಹೆಚ್ಚಿನ ಶಾಲಾ ಶಿಕ್ಷಕರ ಕೊರತೆ ಇದೆ. ಇಂಗ್ಲಿಷ್‌ನಲ್ಲಿ ಸುಮಾರು 2,500, ಗಣಿತದಲ್ಲಿ 20 ಸಾವಿರ, ಸಮಾಜ ವಿಜ್ಞಾನ 6 ಸಾವಿರ, ಜೀವ ವಿಜ್ಞಾನ 4 ಸಾವಿರ ಹುದ್ದೆಗಳು ಖಾಲಿ ಇವೆ. ಈ ಬಾರಿ ಗಣಿತ ಸಮಾಜ ವಿಷಯಗಳ ಶಿಕ್ಷಕರ ಹುದ್ದೆ ಭರ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿಕ್ಷಕರ ಕೊರತೆ ನೀಗಿಸುವುದಕ್ಕಾಗಿ ಪ್ರತೀ ವರ್ಷ ಎರಡು ಬಾರಿ ಟಿಇಟಿ ಮತ್ತು ಒಂದು ಬಾರಿ ಸಿಇಟಿ ಮೂಲಕ ಶಿಕ್ಷಕರ ನೇಮಕಾತಿ ನಡೆಸಲಾಗುತ್ತದೆ. ಹಾಲಿ ಸುಮಾರು 1.5 ಲಕ್ಷ ಟಿಇಟಿ ಅರ್ಹತೆ ಹೊಂದಿರುವವರು ಇದರಲ್ಲಿ ಒಂದು ಲಕ್ಷ ಜನ ಸಮಾಜಶಾಸ್ತ್ರ ವಿಷಯದಲ್ಲಿಯೇ ಅರ್ಹತೆ ಹೊಂದಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಹಾಗೂ ಆಯುಕ್ತ ಡಾ| ಆರ್. ವಿಶಾಲ್ ಉಪಸ್ಥಿತರಿದ್ದರು.
ಶಿಕ್ಷಕರ ಕೊರೆ ನೀಗಿಸುವ ಉದ್ದೇಶದಿಂದ 15 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದ್ದು, ಮುಂದಿನ 6ರಿಂದ 8 ತಿಂಗಳಿನಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ.– ಬಿ.ಸಿ. ನಾಗೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ
ಯಾವ ವಿಷಯಗಳಿಗೆ ಎಷ್ಟು ಶಿಕ್ಷಕರ ಹುದ್ದೆ? :
ವಿಷಯ / ಕಲ್ಯಾಣ ಕರ್ನಾಟಕ/ ಇತರ ಜಿಲ್ಲೆಗಳಿಗೆ/ ಒಟ್ಟು
ಇಂಗ್ಲಿಷ್ /250/ 1,250/ 1,500
ಗಣಿತ, ವಿಜ್ಞಾನ/ 2,000 /4,500 /6,500
ಸಮಾಜ 2,250/ 2,750 /5000
ಜೀವ ವಿಜ್ಞಾನ/ 500/ 1,500 /2,000
ಒಟ್ಟು 5,000 /10,000 / 15,000