Advertisement

Bengaluru: ಕಲಬೆರಕೆ ಆಹಾರ ಪತ್ತೆಗೆ ಮ್ಯಾಜಿಕ್‌ ಬಾಕ್ಸ್‌ ಅಳವಡಿಕೆ

12:33 PM Oct 26, 2024 | Team Udayavani |

ಬೆಂಗಳೂರು: ತರಕಾರಿ ಹಾಗೂ ಆಹಾರ ಧಾನ್ಯ ಮಾರಾಟ ಮಾಡುವ ಮಾರುಕಟ್ಟೆಗಳಲ್ಲಿನ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಪಾರದರ್ಶಕತೆಯನ್ನು ಅಳವಡಿಸಿಕೊಳ್ಳಲು ಮ್ಯಾಜಿಕ್‌ ಬಾಕ್ಸ್‌ ಆಹಾರ ಪರೀಕ್ಷಾ ಕಿಯಾಸ್ಕ್ಗಳು ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ದೇಶದಲ್ಲೇ ಪ್ರಪ್ರಥಮ ಬಾರಿಗೆ ವಿನೂತನ ಪ್ರಯತ್ನವಾಗಿ ನಗರದ ಫಿನಿಕ್ಸ್‌ ಮಾಲ್‌ ಆಫ್ ಏಷ್ಯಾದಲ್ಲಿ ಆಹಾರ ಪದಾರ್ಥಗಳ ತ್ವರಿತ ಪರೀಕ್ಷೆಗಾಗಿ ಪ್ರಾಯೋಗಿಕವಾಗಿ ನಿರ್ಮಿಸಿರುವ ‘ಮ್ಯಾಜಿಕ್‌ ಬಾಕ್ಸ್’ ಆಹಾರ ಪರೀಕ್ಷಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಇನ್ಮುಂದೆ ಸಾರ್ವಜನಿಕರೇ ಫುಡ್‌ ಕೋರ್ಟ್‌ಗಳಲ್ಲಿ ತ್ವರಿತವಾಗಿ ಆಹಾರ ತಪಾಸಣೆ ನಡೆಸಿಕೊಳ್ಳಬಹುದು ಎಂದು ತಿಳಿಸಿದರು. ‌

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಬದಲಾದ ಜೀವನಶೈಲಿ, ಆಹಾರ ಪದ್ಧತಿಗಳು ಮತ್ತು ಮಲಿನ ಗೊಂಡ ಪರಿಸರದಲ್ಲಿ ಬದುಕುತ್ತಿದ್ದು, ಅನಾರೋಗ್ಯ ದಿಂದ ಬಳಲುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ಹೃದಯಾಘಾತ ಮತ್ತು ಕ್ಯಾನ್ಸರ್‌ಗಳಿಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ನಾವು ಸೇವಿಸುವ ಆಹಾರ ಒಳ್ಳೆಯ ಗುಣಮಟ್ಟ ಹಾಗೂ ನೈಸರ್ಗಿಕ ವಸ್ತುಗಳಿಂದ ಕೂಡಿರುವುದನ್ನು ನಾವು ಖಾತರಿ ಪಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿ ಬೆಂಗಳೂರಿನ 10 ಮಾಲ್‌ಗ‌ಳಲ್ಲಿ ಇಲಾಖೆಯಿಂದ ಆಹಾರ ಪದಾರ್ಥಗಳ ಕಲಬೆರಕೆ ಪತ್ತೆ ಹಚ್ಚುವ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ತರಕಾರಿ ಮತ್ತು ಆಹಾರ ಧಾನ್ಯಗಳನ್ನು ಮಾರಾಟ ಮಾಡುವ ಮೋರ್‌, ರಿಲಿಯನ್ಸ್ ಫ್ರೆಶ್‌ ಸೇರಿದಂತೆ ಸೂಪರ್‌ ಮಾರ್ಕೆಟ್‌ ಗಳಲ್ಲೂ ಫುಡ್‌ ಟೆಸ್ಟಿಂಗ್‌ ಕಿಟ್‌ಗಳನ್ನ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ‌

ಇಲ್ಲಿ ನಿತ್ಯ ಬಳಸುವ ಬೇಳೆ ಕಾಳು, ಸಕ್ಕರೆ, ಅಡುಗೆ ಎಣ್ಣೆ, ಹಾಲಿನ ಉತ್ಪನ್ನ, ತರಕಾರಿ ಇತ್ಯಾದಿಗಳನ್ನು ಪರೀಕ್ಷಿಸಿಕೊಳ್ಳಬಹುದು ಎಂದು ತಿಳಿಸಿದರು. ಇಲಾಖೆಯು ನಗರದ ವಿವಿಧ ಭಾಗಗಳಲ್ಲಿ ಸತತವಾಗಿ ಆಹಾರ ಉತ್ಪನ್ನಗಳ ಗುಣಮಟ್ಟದ ಪರೀಕ್ಷೆಯನ್ನು ನಡೆಸುತ್ತಾ ಬಂದಿದೆ. ತೀವ್ರ ವಿವಾದಕ್ಕೀಡಾದ ತುಪ್ಪದ ಸ್ಯಾಂಪಲ್‌ಗ‌ಳನ್ನು ಕೂಡ ಪರೀಕ್ಷಿಸಿದೆ. ಒಟ್ಟು 230 ಸ್ಯಾಂಪಲ್‌ಗ‌ಳಲ್ಲಿ 224 ಸ್ಯಾಂಪಲ್‌ಗ‌ಳು ಸೇವನೆಗೆ ಸುರಕ್ಷಿತವಾಗಿದ್ದು, 5 ಸ್ಯಾಂಪಲ್‌ಗ‌ಳು ಅಸುರಕ್ಷಿತ ಎಂದು ಕಂಡುಬಂದಿದೆ. ಒಂದು ಸ್ಯಾಂಪಲ್‌ ಮಾತ್ರ ಕಳಪೆ ಗುಣಮಟ್ಟದ್ದಾಗಿದೆ ಎಂದು ವರದಿಯಾಗಿದೆ ಎಂದು ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮಾಲ್‌ ಆಫ್‌ ಏಷ್ಯಾದ ಜನರಲ್‌ ಮ್ಯಾನೇಜರ್‌ ಸತೀಶ್‌ ಸೇರಿದಂತೆ ಅಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

ಎಲ್ಲೆಲ್ಲಿ ಆಹಾರ ಪರೀಕ್ಷೆ ಕೇಂದ್ರ ಸ್ಥಾಪನೆ? ನಗರದ ತುಮಕೂರು ರಸ್ತೆಯ ವೈಷ್ಣವಿ ಸಫಾ ಯರ್‌ ಮಾಲ್‌, ಥಣಿಸಂದ್ರದ ಎಲಿಮೆಂಟ್ಸ್‌ ಮಾಲ್‌, ಬನ್ನೇರುಘಟ್ಟ ರಸ್ತೆ ಮೀನಾಕ್ಷಿ ಮಾಲ್‌, ಚರ್ಚ್‌ ಸ್ಟ್ರೀಟ್‌ ಒನ್‌ ಶೋಭಾ ಮಾಲ್‌, ಬೆಳ್ಳಂದೂ ರಿನಲ್ಲಿರುವ ಸೆಂಟ್ರಲ್‌ ಮಾಲ್‌, ಬೆನ್ನಿ ಗಾನಹಳ್ಳಿ ಯಲ್ಲಿರುವ ಗೋಪಾಲನ್‌ ಸಿಗ್ನೇಚರ್‌ ಮಾಲ್‌, ಕೋರಮಂಗಲದಲ್ಲಿರುವ ನೆಕ್ಸಸ್‌ ಫೋರಮ್‌ ಮಾಲ್‌, ಥಣಿಸಂದ್ರದಲ್ಲಿರುವ ಭಾರ ತೀಯ ಮಾಲ್‌ ಆಫ್‌ ಬೆಂಗಳೂರು ಹಾಗೂ ಮಾಗಡಿ ರಸ್ತೆಯಲ್ಲಿರುವ ಜಿ ಟಿ ವರ್ಲ್ಡ್‌ ಮಾಲ್‌ ಸೇರಿ ಒಟ್ಟು 10 ಮಾಲ್‌ಗ‌ಳಲ್ಲಿ ಈ ಆಹಾರ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಇಲಾಖೆ ಆಯುಕ್ತ ಕೆ.ಶ್ರೀನಿವಾಸ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next