ಗದಗ: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ 2,692 ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆಗಳನ್ನು ಕಳೆದ 7 ವರ್ಷಗಳಿಂದ ಭರ್ತಿ ಮಾಡದೇ ಇರುವುದರಿಂದ ವಯೋಮಿತಿ ಮೀರುತ್ತಿರುವ ಹಲವು ಅಭ್ಯರ್ಥಿಗಳು ದಯಾಮರಣಕ್ಕೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ 2,500 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, 8,871 ಉಪಕೇಂದ್ರಗಳಿವೆ. ಒಂದು ಉಪ ಕೇಂದ್ರಕ್ಕೆ ಒಬ್ಬ ಪುರುಷ ಆರೋಗ್ಯ ಸಹಾಯಕರಂತೆ ಒಟ್ಟು 8,871 ಹುದ್ದೆಗಳ ಅವಶ್ಯಕತೆಯಿದೆ.
ಆದರೆ, 2016ರಕ್ಕೂ ಪೂರ್ವದಲ್ಲಿ 5,827 ಹುದ್ದೆಗಳು ಮಂಜೂರಾಗಿದ್ದು, 3,185 ಆರೋಗ್ಯ ಸಹಾಯಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 2016ರಿಂದ ಈವರೆಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹುದ್ದೆ ಖಾಲಿ ಉಳಿದಿದ್ದು, ನೇಮಕ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ.
ಅನುಮೋದನೆ ನೀಡುತ್ತಿಲ್ಲ ಈಗಾಗಲೇ ಆರೋಗ್ಯ ನಿರೀಕ್ಷಣಾಧಿಕಾರಿಗಳ ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವ ಕುರಿತಂತೆ ಸರಕಾರ ಕಳೆದ ಎಂಟು ತಿಂಗಳ ಹಿಂದೆ ಆರ್ಥಿಕ ಇಲಾಖೆಗೆ ಕಡತ ರವಾನಿಸಿತ್ತು. ಆದರೆ, ಆರ್ಥಿಕ ಇಲಾಖೆ ಹುದ್ದೆಗಳ ಪೂರ್ಣ ಪ್ರಮಾಣದ ನೇಮಕಾತಿಗೆ ಅನುಮೋದನೆ ನೀಡುತ್ತಿಲ್ಲ. ಇದರಿಂದ ಬೇಸತ್ತ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆ ಆರಂಭಿಸಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಮಯೋಮಿತಿ ಹೆಚ್ಚುತ್ತಿದೆ ರಾಜ್ಯದಲ್ಲಿ ಡಿಪ್ಲೊಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್ ಅಧ್ಯಯನ ಮುಗಿಸಿದ 10,000ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದು, 2000ಕ್ಕೂ ಹೆಚ್ಚು ಅಭ್ಯರ್ಥಿಗಳು ಮಯೋಮಿತಿ ಮೀರುತ್ತಿದ್ದಾರೆ. ಡಿಪ್ಲೊಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್ ಅಧ್ಯಯನ ಮುಗಿಸಿದ ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಉದ್ಯೋಗ ಅವಕಾಶವೂ ಸಿಗದೆ ಅಸಹಾಯಕ ಸ್ಥಿತಿಗೆ ತಲುಪಿದ್ದು, ದಯಾಮರಣಕ್ಕೆ ಅವಕಾಶ ಕೋರಿ ಅರ್ಜಿ ಸಲ್ಲಿಸಲು ಮಂದಾಗುತ್ತಿದ್ದಾರೆ.
ಜಿಲ್ಲೆಯಲ್ಲಿ 16 ಜನರಿಂದ ಅರ್ಜಿ ಉದ್ಯೋಗದಿಂದ ಅವಕಾಶ ವಂಚಿತರಾಗಿ, ವಯೋಮಿತಿ ಮೀರುತ್ತಿರುವ ಡಿಪ್ಲೊಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್ ಅಧ್ಯಯನ ಮುಗಿಸಿದ 13 ಅಭ್ಯರ್ಥಿಗಳು ಡಿ.29ರಂದು ಮತ್ತು 3 ಅಭ್ಯರ್ಥಿಗಳು ಜ.4ರಂದು ದಯಾಮರಣಕ್ಕೆ ಅವಕಾಶ ಕೊಡಿ ಇಲ್ಲವೇ, ನೇಮಕಾತಿ ಪ್ರಕ್ರಿಯೆ ಆರಂಭಿಸಿ ಎಂದು ಮನವಿ ಮಾಡಿದ್ದಾರೆ.
ಚಂದ್ರು ಕುರ್ತಕೋಟಿ, ಅರುಣ ಉಗಲಾಟ, ಬಸವರಾಜ ತೇಜಪ್ಪನವರ, ಮಲ್ಲಪ್ಪ ಅಡವಿ, ಕಲ್ಲಯ್ಯ ಪತ್ರಿಮಠ, ಮುತ್ತು ಗುಜುಲರ ಸೇರಿ ಒಟ್ಟು 16 ಜನರು ಅರ್ಜಿ ಸಲ್ಲಿಸಿದ್ದಾರೆ.
ನೇಮಕಾತಿಯಿಲ್ಲ ರಾಜ್ಯದಲ್ಲಿ ಸರಕಾರ ಡಿಪ್ಲೊಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡುತ್ತಿದೆ. ಆದರೆ, ನೇಮಕಾತಿ ಮಾತ್ರ ಮಾಡಿಕೊಳ್ಳುತ್ತಿಲ್ಲ. ಪ್ರತಿ ವರ್ಷ ಡಿಪ್ಲೊಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್ ಕೋರ್ಸ್ ಪೂರ್ಣಗೊಳಿಸಿ 2000 ಅಭ್ಯರ್ಥಿಗಳು ಹೊರಬರುತ್ತಿದ್ದಾರೆ. ಇದರಿಂದ ಸಾಕಷ್ಟು ಯುವಕರು ಉದ್ಯೋಗ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಡಿಪ್ಲೊಮಾ ಇನ್ ಹೆಲ್ತ್ ಇನ್ಸ್‌ಪೆಕ್ಟರ್ ಕೋರ್ಸ್ ಬಂದ್ ಮಾಡುವಂತೆ ಅಭ್ಯರ್ಥಿಗಳು ಒತ್ತಾಯಿಸುತ್ತಿದ್ದಾರೆ.