Advertisement

ಅರ್ಜಿ ವಿಲೇವಾರಿಯಾಗಿಲ್ಲ, ಪರಿಹಾರವೂ ಬರ್ಲಿಲ್ಲ!

08:40 AM Jul 26, 2017 | Team Udayavani |

ಬೆಂಗಳೂರು: “ನಾವು ನಿಗದಿತ ಅವಧಿಯೊಳಗೇ ಸೇವೆ ನೀಡುತ್ತೇವೆ, ತಪ್ಪಿದಲ್ಲಿ ದಂಡ ತೆರುತ್ತೇವೆ’ ಎಂಬ ಸಾಲಿನ ಅಡಿಯಲ್ಲಿ ರೂಪಿತವಾಗಿರುವ “ಸಕಾಲ’ ಯೋಜನೆಯಲ್ಲಿ ಸೇವೆಯಷ್ಟೇ ಅಲ್ಲ, ಸರಿಯಾದ ಸಮಯಕ್ಕೆ ಪರಿಹಾರವನ್ನೂ ಕೊಟ್ಟಿಲ್ಲ! ಇದು ರಾಜ್ಯದಲ್ಲಿ ಜಾರಿಯಲ್ಲಿರುವ “ಸಕಾಲ’ದ ಸ್ಥಿತಿ. ಇದುವರೆಗೆ ಈ ಯೋಜನೆಯಡಿ 55.62 ಲಕ್ಷ ಅರ್ಜಿಗಳು ಅವಧಿ ಮೀರಿ ವಿಲೇ ಆಗಿವೆ. ತಡ ಮಾಡಿದ್ದಕ್ಕಾಗಿ ನಿಯಮಗಳ ಪ್ರಕಾರವೇ 50 ಕೋಟಿ ರೂ.ಗಳನ್ನು ಪರಿಹಾರ ರೂಪದಲ್ಲಿ ಅರ್ಜಿದಾರರಿಗೆ ಪಾವತಿ ಮಾಡಬೇಕಿತ್ತು. ಆದರೆ ಕೇವಲ 738 ಅರ್ಜಿದಾರರಿಗೆ, ನೌಕರರ ವೇತನದಿಂದ 77
ಸಾವಿರ ರೂ.ಗಳನ್ನಷ್ಟೇ ಕಡಿತ ಮಾಡಿ ಪರಿಹಾರವಾಗಿ ಪಾವತಿಸಲಾಗಿದೆ. 2015-16ನೇ ಸಾಲಿನಿಂದಲೂ ಪರಿಹಾರ ನೀಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

Advertisement

3.88 ಲಕ್ಷ ಅರ್ಜಿಗಳು 30ಕ್ಕಿಂತ ಹೆಚ್ಚು ದಿನದ ನಂತರ ವಿಲೇವಾರಿಯಾಗಿದ್ದು, 14.20 ಲಕ್ಷ ಅರ್ಜಿಗಳು 15ರಿಂದ 30 ದಿನ ವಿಳಂಬವಾಗಿ ವಿಲೇವಾರಿಯಾಗಿವೆ. ಇನ್ನೂ ಕೆಲವು ಆರು ತಿಂಗಳು, ವರ್ಷದ ನಂತರ ಅರ್ಜಿ ವಿಲೇವಾರಿಯಾಗಿರುವುದು ಕಂಡುಬಂದಿದೆ.

ಕಂದಾಯ ಇಲಾಖೆ ಫ‌ಸ್ಟ್‌: ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಹೆಚ್ಚು ವಿಳಂಬ ಮಾಡಿದ್ದು ಕಂದಾಯ ಇಲಾಖೆ. ಇಲ್ಲಿ ಈವರೆಗೆ 42.84 ಲಕ್ಷ ಅರ್ಜಿಗಳು ಅವಧಿ ಮೀರಿ ವಿಲೇವಾರಿಯಾಗಿದೆ. ಗೃಹ ಇಲಾಖೆಗೆ ಸಂಬಂಧಪಟ್ಟ 4.69 ಲಕ್ಷ ಅರ್ಜಿ, ಸಾರಿಗೆ ಇಲಾಖೆಗೆ ಸಂಬಂಧಪಟ್ಟಂತೆ 2.56 ಲಕ್ಷ ಅರ್ಜಿಗಳು ತೀರಾ ತಡವಾಗಿ ವಿಲೇವಾರಿಯಾಗಿವೆ. ಆದರೆ,
ಮುಖ್ಯಮಂತ್ರಿ ಬಳಿಯಿರುವ ಹಣಕಾಸು ಇಲಾಖೆಗೆ ಸಂಬಂಧಪಟ್ಟಂತೆ 70 ಅರ್ಜಿಗಳು ಮಾತ್ರ ವಿಳಂಬವಾಗಿ ವಿಲೇವಾರಿಯಾಗಿದೆ.

ನಿಯಮಾನುಸಾರ 50 ಕೋಟಿ ರೂ. ಪರಿಹಾರ!: ತಡವಾಗಿ ಅರ್ಜಿ ವಿಲೇ ಮಾಡಿದ್ದಕ್ಕಾಗಿ ಕಾನೂನಿನಲ್ಲೇ ಇರುವಂತೆ ಸಂಬಂಧಪಟ್ಟ ಅಧಿಕಾರಿ, ನೌಕರರ ವೇತನದಿಂದ 77,000 ರೂ. ಕಡಿತಗೊಳಿಸಿ ಅರ್ಜಿದಾರರಿಗೆ ಪರಿಹಾರ ನೀಡಲಾಗಿದೆ. ಆದರೆ 55.62 ಲಕ್ಷ ಅರ್ಜಿಗಳ ವಿಳಂಬ ವಿಲೇವಾರಿಗೆ ಕನಿಷ್ಠ ಪರಿಹಾರ ವಿತರಿಸಿದರೂ ಒಟ್ಟಾರೆಯಾಗಿ 50 ಕೋಟಿ ರೂ.ಗಿಂತ ಹೆಚ್ಚು ಪರಿಹಾರ ಸಿಗಬೇಕಿತ್ತು. ಆದರೆ ಪರಿಹಾರ ಮೊತ್ತ ದಿನಕ್ಕೆ 20 ರೂ. ಇದ್ದು, ಕಡಿಮೆ ಎಂಬ ಕಾರಣಕ್ಕೋ ಅಥವಾ ಅದನ್ನು ಪಡೆಯಲು ಹೆಚ್ಚು ಹಣ ವೆಚ್ಚವಾಗುವ ಲೆಕ್ಕಾಚಾರದಿಂದಲೋ ಪರಿಹಾರ ಕ್ಕಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆಯೇ ಕಡಿಮೆ.

ಪರಿಹಾರದಲ್ಲೂ ಭಾರಿ ವಿಳಂಬ: ಅವಧಿ ಮೀರಿ ಅರ್ಜಿ ವಿಲೇವಾರಿಗಾಗಿ ಐಎಎಸ್‌ ಅಧಿಕಾರಿ ವೇತನದಿಂದಲೂ ಹಣ ಕಡಿತಗೊಳಿಸಿದ ಉದಾಹರಣೆ ಇದೆ. ಕೆಲ ವರ್ಷದ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ಕೆ.ಪಿ.ಮೋಹನ್‌ರಾಜ್‌ ಅವರ ವೇತನದಿಂದ 260 ರೂ. ಕಡಿತಗೊಳಿಸಿ ಅರ್ಜಿದಾರರಿಗೆ ವಿತರಿಸಲಾಗಿದೆ. ಹೀಗಿರುವಾಗ 2015-16ನೇ ಸಾಲಿನಿಂದ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರಿಗೆ ಈವರೆಗೆ ಪರಿಹಾರ ನೀಡಿಲ್ಲ. ಇದರಿಂದ ಜನರಿಗೂ ಸಕಾಲದ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದ್ದರೆ, ಅಧಿಕಾರಿಗಳು ಸಹ ಕಾಲಮಿತಿಯೊಳಗೆ ಕೋರಿದ ಸೇವೆ ಒದಗಿಸಲು ಆಸಕ್ತಿ ತೋರದಂತಾಗಿದೆ. ಇದರಿಂದ ಯೋಜನೆ ಮಂಕಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ನಿಧಿಯೂ ಇಲ್ಲ- ಪರಿಹಾರವೂ ಕೊಡುತ್ತಿಲ್ಲ:
ಸಕಾಲದಡಿ ಅವಧಿ ಮೀರಿ ಅರ್ಜಿ ವಿಲೇವಾರಿ ಪ್ರಕರಣದಲ್ಲಿ ಅರ್ಜಿದಾರರಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳು ಸೇರಿ ಇಲಾಖಾ ಹಿರಿಯ ಅಧಿಕಾರಿಗಳ ಬಳಿಯ ತುರ್ತು ನಿಧಿ ಬಳಸಲಾಗುತ್ತಿತ್ತು. ನಂತರ ಸಂಬಂಧಪಟ್ಟ ಅಧಿಕಾರಿಯ ವೇತನದಿಂದ ನಿರ್ದಿಷ್ಟ ಮೊತ್ತ ಕಡಿತ ಮಾಡಿಕೊಂಡು ನಿಧಿಗೆ ಜಮೆ ಮಾಡಲಾಗುತ್ತಿತ್ತು.
ಆದರೆ ಎರಡು ವರ್ಷಗಳಿಂದ ತುರ್ತು ನಿಧಿಯಡಿ ಪರಿಹಾರ ನೀಡುವುದೇ ಸ್ಥಗಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಸಕಾಲ ಯೋಜನೆ ಜಾರಿಯಾದಾಗಿನಿಂದ ಈವರೆಗೆ 13 ಕೋಟಿಗೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, 40,000 ಮಾತ್ರ ಬಾಕಿ ಉಳಿದಿವೆ. ಸಕಾಲವನ್ನು ಸದೃಢಗೊಳಿಸಲು ಸಕಾಲ ಮಿಷನ್‌ನನ್ನು ಡಿಪಿಎಆರ್‌ನ ಆಡಳಿತ ಸುಧಾರಣೆ
ವಿಭಾಗದಿಂದ ಇ- ಆಡಳಿತ ವಿಭಾಗಕ್ಕೆ ಮುಖ್ಯಮಂತ್ರಿಗಳು ವರ್ಗಾಯಿಸಿದ್ದು, ಸಾಕಷ್ಟು ಬದಲಾವಣೆಗಳಾಗುತ್ತಿವೆ.
ಅರ್ಜಿಗಳ ವಿಲೇವಾರಿ ವಿಳಂಬವಾಗು ತ್ತಿರುವುದು ಗಮನಕ್ಕೆ ಬಂದಿದ್ದು, ತ್ವರಿತ ವಿಲೇವಾರಿಗೆ ಆದ್ಯತೆ ನೀಡಲಾಗಿದೆ.
 ಕೆ.ಮಥಾಯಿ, ಸಕಾಲ ಆಡಳಿತಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next