Advertisement

ಅನಧಿಕೃತ ಸಾಗುವಳಿ ಸಕ್ರಮಕ್ಕೆ ‘ನಮೂನೆ 57’ಅರ್ಜಿ

01:00 AM Feb 08, 2019 | Harsha Rao |

ಮಣಿಪಾಲ: ಸರಕಾರಿ ಭೂಮಿಯಲ್ಲಿರುವ ಅನಧಿಕೃತ ಸಾಗುವಳಿ ಸಕ್ರಮ ಗೊಳಿಸುವುದಕ್ಕೆ ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಕಲಂ 94-ಎ(4)ನ್ನು ತಿದ್ದುಪಡಿ ಮಾಡಲಾಗಿದ್ದು ಅದರಂತೆ ಭೂ ಕಂದಾಯ ನಿಯಮಾವಳಿಗಳು 1966ರ ನಿಯಮ 108 ಸಿಸಿ ಬಳಿಕ 108 ಸಿಸಿಸಿಯನ್ನು ಸೇರ್ಪಡೆಗೊಳಿಸಿ ಹೊಸದಾಗಿ ನಮೂನೆ 57ರ ಮೂಲಕ ಅರ್ಜಿ ಸಲ್ಲಿಕೆಗೆ ಸರಕಾರ ಅವಕಾಶ ನೀಡಲಾಗಿದೆ.

Advertisement

ಅನಧಿಕೃತ ಅದಿಭೋಗವನ್ನು ಸಕ್ರಮಗೊಳಿಸಲು ಈ ಹಿಂದೆ ಇದ್ದ 14-4-1990ರ ಕಟ್ಆಫ್ ದಿನಾಂಕವನ್ನು 1-1-2005ಕ್ಕೆ ನಿಗದಿಪಡಿಸಲಾಗಿದ್ದು, ಅರ್ಜಿ ಸಲ್ಲಿಕೆಗೆ 16-3-2019ರ ವರೆಗೆ ಅವಕಾಶ ನೀಡಲಾಗಿದೆ.

ನಿರ್ಬಂಧಿತ ಅಂತರ

ಸಾಗುವಳಿ ಸಕ್ರಮಕ್ಕೆ ಅರ್ಹ ಗ್ರಾಮಗಳನ್ನು ಗುರುತಿಸುವುದಕ್ಕಾಗಿ ನಿರ್ಬಂಧಿತ ಭೂ ಅಂತರವನ್ನು ನಿಗದಿ ಪಡಿಸಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಿಂದ 18 ಕಿ.ಮೀ., ಮಹಾನಗರ ಪಾಲಿಕೆಗಳಿಂದ 10 ಕಿ.ಮೀ., ನಗರಸಭೆಗಳಿಂದ 5 ಕಿ.ಮೀ., ಪುರಸಭೆ, ಪಟ್ಟಣ ಪಂಚಾಯತ್‌ಗಳಿಂದ 3 ಕಿ.ಮೀ. ನೇರ ಅಂತರದಲ್ಲಿರುವ ಗ್ರಾಮ ಗಳ ಜನರು ನಮೂನೆ 57ರ ಅರ್ಜಿ ಸಲ್ಲಿಸಬಹುದು. ನಿರ್ದಿಷ್ಟ ಗ್ರಾಮಗಳ ಮಾಹಿತಿಯನ್ನು ಗ್ರಾಮ ಕರಣಿಕರಿಂದ ಪಡೆದುಕೊಳ್ಳಬಹುದು.

ಹೀಗೆ ಅರ್ಜಿ ಸಲ್ಲಿಸಿ

Advertisement

ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಸೂಕ್ತ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ರೂ. 100 ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಪ್ರತ್ಯೇಕ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ ಕೈ ಬರಹದಲ್ಲಿ ನೀಡ ಲಾದ ಅರ್ಜಿಗಳನ್ನು ಕೂಡಲೇ ತಂತ್ರಾಂಶದಲ್ಲಿ ನಮೂದಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಂತ್ರಾಂಶದಲ್ಲಿರದ ಅರ್ಜಿಗಳ ಪ್ರಕ್ರಿಯೆ ಮುಂದು ವರಿಸುವಂತಿಲ್ಲ.

ಜ್ಯೇಷ್ಠತೆ ಆಧಾರದಲ್ಲಿ ದಾಖಲು

ಅರ್ಜಿಗಳನ್ನು ಸ್ವೀಕೃತಿ ಜ್ಯೇಷ್ಠತೆ ಆಧಾರದಲ್ಲಿ ನಮೂನೆ 58ರ ರಿಜಿಸ್ಟರ್‌ನಲ್ಲಿ ದಾಖಲಿಸಲು ತಹಶೀಲುದಾರರಿಗೆ ಭೂ ಮಂಜೂರಾತಿ ವಿಭಾಗದ (ಕಂದಾಯ ಇಲಾಖೆ) ಸರಕಾರದ ಅಧೀನ ಕಾರ್ಯದರ್ಶಿ ಸೂಚಿಸಿದ್ದಾರೆ.

ಇವರಿಗೆ ಅವಕಾಶವಿಲ್ಲ

ಸಾಗುವಳಿಯನ್ನು ಸಕ್ರಮಗೊಳಿಸಲು ಕಲಂ 94(ಎ) ನಮೂನೆ 50 ಮತ್ತು ಕಲಂ 94 (ಬಿ) ನಮೂನೆ 53ರ ಅಡಿಯಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿದವರು ಹೊಸದಾಗಿ ನಮೂನೆ 57ರಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಇರುವುದಿಲ್ಲ. ಪರಂಬೋಕು ಪ್ರದೇಶಗಳು, ಕೇಂದ್ರ ಸರಕಾರ, ಸರಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಭೂಮಿ, ಪ್ರಸ್ತುತದ ಹಾಗೂ ಪ್ರಸ್ತಾವಿತ ರಸ್ತೆ, ಹೆದ್ದಾರಿಗೆ ಮೀಸಲಾದ ಪ್ರದೇಶ, ಉದ್ಯಾನ, ಕ್ರೀಡಾಂಗಣಕ್ಕೆ ಮೀಸಲಿರುವ ಪ್ರದೇಶ, ಭೂ ಸ್ವಾಧೀನಕ್ಕೆ ಪ್ರಸ್ತಾವಿತ ಪ್ರದೇಶ ಇದ್ದರೆ ಇವುಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ವ್ಯವಸಾಯೇತರ ಉದ್ದೇಶಕ್ಕೆ ಬಳಸುವಂತಿಲ್ಲ

ಸಕ್ರಮಗೊಳಿಸಲಾದ ಭೂಮಿಯನ್ನು ಮುಂದಿನ 25 ವರ್ಷದ ವರೆಗೆ ಪರಭಾರೆ ಮಾಡುವುದು ಮತ್ತು ವ್ಯವಸಾಯೇತರ ಉದ್ದೇಶಕ್ಕೆ ಬಳಸುವುದಕ್ಕೆ ಅವಕಾಶ ಇಲ್ಲ. ನಮೂನೆ 50, 53ರ ಅಡಿ ಅರ್ಜಿ ಸಲ್ಲಿಸಿದವರು ಭೂಮಿ ಪರಭಾರೆ ಮಾಡಬೇಕಾದರೆ ನಿಗದಿತ ಅವಧಿ ಮುಗಿದ ಬಳಿಕ ಸರಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ನೀಡಿದ ನಿರಕ್ಷೇಪಣಾ ಪತ್ರಗಳನ್ನು ಹಿಂಪಡೆದು ಸಬ್‌ ರಿಜಿಸ್ಟ್ರಾರ್‌ಗಳಿಗೆ ಸೂಚನೆ ನೀಡಲು ಸರಕಾರ ತಹಶೀಲ್ದಾರರಿಗೆ ಆದೇಶಿಸಿದೆ.

ಪಾರದರ್ಶಕತೆಗೆ ಸೂಚನೆ

ನಮೂನೆ 57ರ ಅರ್ಜಿಗಳ ವಿಲೇಗೆ ಸಂಬಂಧಿಸಿದಂತೆ ಪಾರದರ್ಶಕತೆ ಪಾಲಿಸಲು ಹಾಗೂ ಅರ್ಜಿಗಳನ್ನು ಪರಿಶೀಲಿಸಿ ಸಕ್ರಮೀಕರಣ ಸಮಿತಿ ಮುಂದಿರಿಸಿ ಇತ್ಯರ್ಥಪಡಿಸಲು ತಹಶೀಲ್ದಾರರಿಗೆ ಸರಕಾರ ಆದೇಶಿಸಿದೆ.

ನಿಯಮಾನುಸಾರ ಇತ್ಯರ್ಥ

ಸಮರ್ಪಕ ದಾಖಲೆಗಳೊಂದಿಗೆ ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ನಮೂನೆ 57ರ ಅರ್ಜಿ ಸಲ್ಲಿಸಬಹುದು. ಕೈ ಬರಹದಲ್ಲಿ ನೀಡಿದ ಅರ್ಜಿಗಳನ್ನು ತಂತ್ರಾಂಶಕ್ಕೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಸ್ವೀಕೃತ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಪಡಿಸಲಾಗುವುದು.

-ಪ್ರದೀಪ್‌ ಕುರ್ಡೇಕರ್‌, ಉಡುಪಿ ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next