ಬೆಂಗಳೂರು: ಸಂಕಷ್ಟದಲ್ಲಿರುವ ರಾಜ್ಯದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ “ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿ’ಯಿಂದ ತಲಾ 10 ಸಾವಿರ ರೂ. ಪರಿಹಾರ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ವಿಧಾನಪರಿಷತ್‌ನ ಮಾಜಿ ಸದಸ್ಯ ರಮೇಶ್ ಬಾಬು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿ ಅರ್ಜಿಯ ಮತ್ತೂಂದು ಪ್ರತಿಯನ್ನು ಸರಕಾರದ ಪರ ವಕೀಲರಿಗೆ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಇದೆ. ಅದನ್ನು ಈ ಕಷ್ಟದ ಸಮಯದಲ್ಲಿ ಕಾರ್ಮಿಕರಿಗೆ ನೆರವು ನೀಡಲು ಬಳಸಿಕೊಳ್ಳಬೇಕು. 15 ದಿನಗಳಲ್ಲಿ ಎಲ್ಲಾ ಕಾರ್ಮಿಕರ ಬ್ಯಾಂಕ್ ಖಾತೆಗಳಲ್ಲಿ 10 ಸಾವಿರ ರೂ. ಜಮೆ ಮಾಡಬೇಕು. ಕೋವಿಡ್-19 ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರ ಪುನರ್ವಸತಿ ನಿಧಿ ಸ್ಥಾಪಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಪಿಐಎಲ್: ಸರಕಾರಕ್ಕೆ ನೋಟಿಸ್ ಜಾರಿ
ಬೆಂಗಳೂರು ಮಾಧ್ಯಮ ಪ್ರತಿನಿಧಿಗಳು, ಪತ್ರಿಕಾ ವಿತರಕರು ಮತ್ತು ಏಜೆಂಟರು ಕೋವಿಡ್-19 ಸೋಂಕಿನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಕೋ. ರೂ. ಪರಿಹಾರ ಘೋಷಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಪಿಐಎಲ್ ಸಂಬಂಧ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕೋರಮಂಗಲದ ಜಾಕೊಬ್ ಜಾರ್ಜ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆಯೇ ಸುದ್ದಿವಾಹಿನಿ ಮತ್ತು ಪತ್ರಿಕೆಗಳ ಪ್ರತಿನಿಧಿಗಳು ಸೋಂಕಿತ ಪ್ರದೇಶ, ಆಸ್ಪತ್ರೆ, ಸೋಂಕಿತರ ಕುಟುಂಬಗಳ ಸದಸ್ಯರ ಬಳಿ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವರೂ ಸಹ ಕೋವಿಡ್-19 ವಾರಿಯರ್ಸ್ ಆಗಿದ್ದಾರೆ. ಆದ್ದರಿಂದ ಇವರಲ್ಲಿ ಯಾರಾದರೂ ಸೋಂಕಿನಿಂದ ಸಾವಿಗೀಡಾದರೆ ಮೃತರ ಕುಟುಂಬಕ್ಕೆ ಒಂದು ಕೋ. ರೂ. ಪರಿಹಾರ ಘೋಷಿಸಲು ನಿರ್ದೇಶಿಸಬೇಕು ಎಂದು ಕೋರಿದರು.