Advertisement

ಬಿಸಿಸಿಐಯಲ್ಲಿ ಗಂಗೂಲಿ, ಶಾ ಮುಂದುವರಿಕೆಗೆ ವಿರೋಧ

02:07 AM Aug 06, 2020 | Hari Prasad |

ಹೊಸದಿಲ್ಲಿ: ಬಿಸಿಸಿಐ ಅಧ್ಯಕ್ಷರನ್ನಾಗಿ ಸೌರವ್‌ ಗಂಗೂಲಿ ಅವರನ್ನು ಮತ್ತು ಕಾರ್ಯದರ್ಶಿಯನ್ನಾಗಿ ಜಯ್‌ ಶಾ ಅವರನ್ನು 2025ರವರೆಗೆ ಮುಂದುವರಿಸಿ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದೆ.

Advertisement

ಇದರ ವಿಚಾರಣೆ ಆ. 17ರಂದು ನಡೆಯಲಿದೆ. ಇದರ ಬೆನ್ನಲ್ಲೇ ಇದಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹಿಸಿ ಜಾರ್ಖಂಡ್‌ ಕ್ರಿಕೆಟ್‌ ಮಂಡಳಿಯ ಆಜೀವ ಸದಸ್ಯ ನರೇಶ್‌ ಮಲ್ಕಾನಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಹೊಸ ಸಂವಿಧಾನವನ್ನು ಬದಲಿಸಿ ಗಂಗೂಲಿ ಮತ್ತು ಶಾಗೆ ಅವಕಾಶ ನೀಡುವುದು, ಲೋಧಾ ಸಮಿತಿಯ ಆಶಯವನ್ನೇ ಹಾಳು ಮಾಡುತ್ತದೆ. ಸಂವಿಧಾನವನ್ನು ತಿದ್ದಲು ಹೊರಟಿರುವುದು, ಲೋಧಾ ಸಮಿತಿಯ ಶಿಫಾರಸನ್ನು ಸಡಿಲುಗೊಳಿಸುತ್ತಿರುವುದು ದುರುದ್ದೇಶಪೂರಿತ ಎಂದು ಮಲ್ಕಾನಿ ಹೇಳಿದ್ದಾರೆ.

ಅಧಿಕಾರಾವಧಿ ಮುಗಿದಿದೆ
ಕ್ರಿಕೆಟ್‌ ಮಂಡಳಿಯ ಹೊಸ ನಿಯಮಗಳ ಪ್ರಕಾರ, ರಾಜ್ಯ ಸಂಸ್ಥೆಯನ್ನು ಸೇರಿಸಿ ಅಥವಾ ಬಿಸಿಸಿಐ ಒಂದರಲ್ಲೇ ಸತತ 6 ವರ್ಷ ಅಧಿಕಾರಾವಧಿ ಪೂರೈಸಿದ್ದರೆ, ಅವರು 3 ವರ್ಷ ವಿಶ್ರಾಂತಿ ತೆಗೆದುಕೊಳ್ಳುವುದು ಕಡ್ಡಾಯ.

ಗಂಗೂಲಿ ಮತ್ತು ಶಾ ಇಬ್ಬರೂ ತಮ್ಮ ರಾಜ್ಯ ಸಂಸ್ಥೆಗಳಲ್ಲೇ 5 ವರ್ಷ, 3 ತಿಂಗಳ ಅವಧಿಯನ್ನು ಕಳೆದಿದ್ದಾರೆ. ಉಳಿದ 9 ತಿಂಗಳನ್ನು ಬಿಸಿಸಿಐಯಲ್ಲಿ ಕಳೆದಿದ್ದಾರೆ. ಆದ್ದರಿಂದ ಬಿಸಿಸಿಐಯಲ್ಲಿ ಅವರ ಅಧಿಕಾರಾವಧಿ ತಾಂತ್ರಿಕವಾಗಿ ಈಗಾಗಲೇ ಮುಗಿದಿದೆ.

Advertisement

ಸದ್ಯ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವುದರಿಂದ, ಪ್ರಕರಣ ಇತ್ಯರ್ಥವಾಗುವವರೆಗೆ ಇಬ್ಬರೂ ಮುಂದುವರಿಯಲಿದ್ದಾರೆ. ಒಂದು ವೇಳೆ ಗಂಗೂಲಿಗೆ ಮುಂದುವರಿಯಲು ನ್ಯಾಯಾಲಯ ಅವಕಾಶ ನೀಡದಿದ್ದ ಪಕ್ಷದಲ್ಲಿ ಅವರು ಐಸಿಸಿ ಮುಖ್ಯಸ್ಥ ಸ್ಥಾನಕ್ಕೆ ಸ್ಪರ್ಧಿಸುವುದು ಖಚಿತ. ಬಂಗಾಲ ಬಿಜೆಪಿಯ ನೇತೃತ್ವ ವಹಿಸುವ ಅವಕಾಶವೂ ಅವರಿಗೆ ಇದೆಯೆಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next