ಚಿತ್ರಕ್ಕೆ ಶೀರ್ಷಿಕೆ ಮುಖ್ಯವೋ, ಕಥೆ ಮುಖ್ಯವೋ? ಸಹಜವಾಗಿಯೇ ಕಾಡುವ ಪ್ರಶ್ನೆ ಇದು. ಹಾಗೆ ಹೇಳುವುದಾದರೆ, ಒಂದು ಚಿತ್ರಕ್ಕೆ ಕಥೆ ಎಷ್ಟು ಮುಖ್ಯವಾಗುತ್ತೋ, ಶೀರ್ಷಿಕೆ ಕೂಡ ಅಷ್ಟೇ ಮುಖ್ಯವಾಗುತ್ತೆ. ಕನ್ನಡದಲ್ಲಿ ತರಹೇವಾರಿ ಶೀರ್ಷಿಕೆವುಳ್ಳ ಚಿತ್ರಗಳು ಬಂದಿವೆ. ಹಾಗಂತ, ವಿಭಿನ್ನ ಶೀರ್ಷಿಕೆ ಇಟ್ಟುಕೊಂಡು ಬಂದ ಚಿತ್ರಗಳೆಲ್ಲವೂ ಯಶಸ್ಸು ಪಡೆದಿವೆ ಎಂಬರ್ಥವಲ್ಲ. ಶೀರ್ಷಿಕೆ ಆಕರ್ಷಣೆಯಾಗಿದ್ದರೂ, ಕಥೆ ಆವರಿಸಿಕೊಳ್ಳುವುದು ಕಷ್ಟ.
ಹಾಗಾಗಿ, ಇಲ್ಲಿ ಶೀರ್ಷಿಕೆಯ ಜೊತೆಗೆ ಕಥೆಯೂ ಮುಖ್ಯವಾಗುತ್ತೆ. ಇಲ್ಲೀಗ ಹೇಳುತ್ತಿರುವುದು ಕೂಡ ಅಂಥದ್ದೇ ಶೀರ್ಷಿಕೆವುಳ್ಳ ಚಿತ್ರದ ಬಗ್ಗೆ. ಅದರ ಹೆಸರು “ಆ್ಯಪಲ್ ಕೇಕ್’ ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕನ್ನಡ ಮಾತ್ರವಲ್ಲ, ತೆಲುಗು ಮತ್ತು ತಮಿಳು ಭಾಷೆಯಲ್ಲೂ “ಆ್ಯಪಲ್ ಕೇಕ್’ ಬಿಡುಗಡೆಯಾಗಲಿದೆ. ಇತ್ತೀಚೆಗೆ ಚಿತ್ರದ ಹಾಡುಗಳು ಹೊರಬಂದಿವೆ.
ಮ್ಯೂಸಿಕ್ ಬಜಾರ್ ಮೂಲಕ ಹಾಡುಗಳನ್ನು ಹೊರತಂದ ಚಿತ್ರತಂಡ, ಒಂದು ಯೂಥ್ ಕಥೆ ಇಟ್ಟುಕೊಂಡು ಈ ಚಿತ್ರ ಮಾಡಿದೆ. ಲೈಫಲ್ಲಿ ಕೆಲವರು ಒಂದಲ್ಲ, ಒಂದು ಕಾರಣಕ್ಕೆ ಬೇಡವಾಗಿಬಿಡುತ್ತಾರೆ. ಅಂತಹ ವ್ಯಕ್ತಿಗಳೆಲ್ಲ ಒಂದು ಕಡೆ ಸೇರಿ, ಮುಂದೊಂದು ದಿನ ಎಲ್ಲರೂ ತಿರುಗಿ ನೋಡುವಂತಹ ಸಾಧನೆ ಮಾಡಬೇಕು ಎಂದು ಹಠದಿಂದ ಹೊರಡುತ್ತಾರೆ. ಆಮೇಲೆ ಅವರು ಸಾಧನೆ ಮಾಡುತ್ತಾರೋ ಇಲ್ಲವೋ ಅನ್ನುವುದು ಕಥೆ.
ಅಂದಹಾಗೆ, ರಂಜಿತ್ ಕುಮಾರ್ ಗೌಡ ಈ ಚಿತ್ರದ ನಿರ್ದೇಶಕರು. ಅರವಿಂದ್ ಕುಮಾರ್ ಗೌಡ ಈ ಚಿತ್ರದ ನಾಯಕರಷ್ಟೇ ಅಲ್ಲ, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. “ದಾನಮ್ಮ ದೇವಿ’ ಅವರ ಮೊದಲ ಚಿತ್ರ. ಈ ಕಥೆ ಕೇಳಿದ ನಂತರ ನಿರ್ಮಾಪಕರಿಗೆ ಒಳ್ಳೆಯ ಚಿತ್ರವಾಗುತ್ತೆ ಎಂಬ ನಂಬಿಕೆ ಬಂದಿದೆ. ಮೊದಲು ಐವರು ಸ್ನೇಹಿತರು ಸೇರಿ ಒಂದು ಬ್ಯಾನರ್ ಶುರು ಮಾಡಿ, ಈ ಚಿತ್ರ ಮಾಡಿದ್ದಾರೆ. ಶ್ರೀಧರ್ ಹಾಡು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ ವಿಜಯ್ ಶಂಕರ್, ಅರವಿಂದ್ ಕುಮಾರ್, ರಂಜಿತ್, ಶುಭರಕ್ಷ, ಚೈತ್ರಾ ಶೆಟ್ಟಿ, ಕೃಷ್ಣ ಹನಗಿ ಇತರರು ನಟಿಸಿದ್ದಾರೆ.