ಕನ್ನಡದಲ್ಲಿ ಈಗಾಗಲೇ ಅಪ್ಪ ಮಗನ ಬಾಂಧವ್ಯ ಕುರಿತ ಅನೇಕ ಚಿತ್ರಗಳು ಬಂದಿವೆ. ಆದರೆ, ಇದೇ ಮೊದಲ ಬಾರಿಗೆ ಬಡತನದ ಬೇಗೆಯಲ್ಲಿರುವ ಅಪ್ಪ ಮತ್ತು ಕುಬ್ಜ ಮಗನ ಕಥೆ ಇರುವಂತಹ ಸಿನಿಮಾ ಮೂಡಿಬಂದಿದ್ದು, ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ, ಆ ಚಿತ್ರದ ಹೆಸರು “ಜೀರೋ ಮೇಡ್ ಇನ್ ಇಂಡಿಯಾ’.
ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಗುಲ್ಬರ್ಗ ಸೇರಿದಂತೆ ಸುಮಾರು 15 ಮಾಲ್‌ಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ರಿಲೀಸ್ ಆಗಿರುವ ಎಲ್ಲಾ ಮಾಲ್‌ಗಳಲ್ಲೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಷ್ಟೇ ಅಲ್ಲ, ಈಗಾಗಲೇ “ಜೀರೋ ಮೇಡ್ ಇನ್ ಇಂಡಿಯಾ’ ಸಿನಿಮಾ ಏಳು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಆಯ್ಕೆಗೊಂಡಿದ್ದು, ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಇದರ ಜತೆಗೆ ಇನ್ನೊಂದು ಸಂತಸದ ವಿಷಯ ಕೂಡ ಈ ಚಿತ್ರಕ್ಕೆ ಸಿಕ್ಕಿದೆ. ಹಿಂದಿ ಭಾಷೆಗೆ ಈ ಚಿತ್ರವನ್ನು ರೀಮೇಕ್ ಮಾಡಲು ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಶಿವದಾಸನಿ ಅವರು ಈಗಾಗಲೇ ಆಸಕ್ತಿ ತೋರಿಸಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ದಿನಗಳಲ್ಲಿ ಈ ಚಿತ್ರ ಹಿಂದಿಗೂ ರಿಮೇಕ್ ಆಗಲಿದೆ ಎಂಬುದು ಚಿತ್ರತಂಡದ ಮಾತು.
ಇನ್ನು, ಮುಂದಿನ ವಾರದಿಂದ ಸುಮಾರು 20 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ದೇಶಕ ಗಿರಿದೇವ್‌ಹಾಸನ್ ಅಣಿಯಾಗಿದ್ದಾರೆ. ನಿರ್ದೇಶಕ ಗಿರಿದೇವ್ ಹಾಸನ್ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಇಲ್ಲಿ ನಟರಾಜ್ ತಂದೆಯಾಗಿ ನಟಿಸಿದರೆ, ಮಧುಸೂದನ್ ಅವರು ಮಗನಾಗಿ ಕಾಣಿಸಿಕೊಂಡಿದ್ದಾರೆ.
ನಂದಿನಿ ಲೇಔಟ್‌ನ ಶಾಲೆಯೊಂದರಲ್ಲಿ ನಾಲ್ಕನೆ ತರಗತಿ ಓದುತ್ತಿರುವ ಮಧುಸೂದನ್ ಈ ಚಿತ್ರದ ಮುಖ್ಯ ಆಕರ್ಷಣೆ ಎನ್ನುವ ನಿರ್ದೇಶಕರು, ಇಲ್ಲಿ ಅಪ್ಪ, ಮಗನ ಸಂಬಂಧವನ್ನು ಮುಖ್ಯವಾಗಿಟ್ಟುಕೊಂಡು ಚಿತ್ರಿಸಲಾಗಿದೆ. ಅಪ್ಪನಿಗೆ ಅಪಘಾತವಾಗಿ ಸ್ವಲ್ಪಮಟ್ಟಿಗೆ ಜ್ಞಾಪಕಶಕ್ತಿ ಕಳೆದು ಹೋಗಿರುತ್ತದೆ. ಮಗ ಆ ಸಂದರ್ಭವನ್ನು ಅರ್ಥ ಮಾಡಿಕೊಂಡು ತನ್ನ ತಂದೆ ವೃತ್ತಿಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತರಲು ಶ್ರಮಿಸುತ್ತಾನೆ.
ಇನ್ನೊಂದು ಕಡೆ ತಾನು ಸತ್ತರೆ ವಿಮೆ ಹಣವಾದರೂ ತನ್ನ ಮಗನಿಗೆ ಸಿಗುತ್ತಲ್ಲ ಎಂದು ಹಪಿಸುವ ತಂದೆ. ಕೊನೆಗೆ ಏನಾಗುತ್ತದೆ ಅನ್ನೋದೇ ಸಿನಿಮಾದ ಒನ್‌ಲೈನ್ ಎನ್ನುತ್ತಾರೆ ನಿರ್ದೇಶಕರು. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಇಲ್ಲಿ ಕೆಲಸ ಮಾಡಿರುವ ತಂತ್ರಜ್ಞರೆಲ್ಲರೂ ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಕೆಲಸ ಮಾಡಿದ್ದಾರಂತೆ. ವೈದ್ಯಾ ಈ ಚಿತ್ರವನ್ನು ನಿರ್ಮಿಸಿದ್ದಾರೆ.