ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಮಕ್ಕಳ ಸಿನಿಮಾಗಳಿಗೆ ಅಪ್ಪಂದಿರು ಹಾಡಿರುವ ಉದಾಹರಣೆಗಳು ಸಾಕಷ್ಟಿವೆ. ಆ ಸಾಲಿಗೆ ಈಗ ಹೊಸಬರ “ಅಡಚಣೆಗಾಗಿ ಕ್ಷಮಿಸಿ’ ಚಿತ್ರ ಹೊಸ ಸೇರ್ಪಡೆ. ಹೌದು, ಭರತ್ ಎಸ್. ನವುಂದ ನಿರ್ದೇಶನದ ಈ ಚಿತ್ರಕ್ಕೆ ಪ್ರದೀಪ್ ವರ್ಮ ನಾಯಕರಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಪ್ರದೀಪ್ ವರ್ಮ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರವನ್ನು ಪ್ರದೀಪ್ ವರ್ಮ ಅವರ ತಂದೆ ಸದ್ಗುಣ ಮೂರ್ತಿ ನಿರ್ಮಾಪಕರು.
ವಿಶೇಷವೆಂದರೆ, ಚಿತ್ರದ ಹಾಡೊಂದಕ್ಕೆ ನಾಯಕ ಪ್ರದೀಪ್ ವರ್ಮ ಅವರ ತಂದೆ ಸದ್ಗುಣ ಮೂರ್ತಿ ಧ್ವನಿಯಾಗಿದ್ದಾರೆ. ಸದ್ಗುಣಮೂರ್ತಿ ಕೂಡ ಸಂಗೀತ ನಿರ್ದೇಶಕರು. ಈ ಹಿಂದೆ ಜಗ್ಗೇಶ್ ಅಭಿನಯದ “ವೀರಣ್ಣ’, “ಮನೆ ಮನೆ ರಾಮಾಯಣ’ ಚಿತ್ರಕ್ಕೆ ಸಂಗೀತ ನೀಡಿದವರು. ಅಷ್ಟೇ ಅಲ್ಲ, ಸಾಕಷ್ಟು ಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನೂ ಒದಗಿಸಿದ್ದಾರೆ. ಮಗ ಪ್ರದೀಪ್ ವರ್ಮ ಅಭಿನಯದ “ಢಮ್ಮಿ ಢಮಾರ್’ ಮತ್ತು ‘ಅಡಚಣೆಗಾಗಿ ಕ್ಷಮಿಸಿ’ ಚಿತ್ರವನ್ನು ನಿರ್ಮಿಸಿದ್ದಾರೆ ಕೂಡ.
ಸಂಗೀತ ನಿರ್ದೇಶನದ ಜೊತೆಗೆ ಅಲ್ಲಲ್ಲಿ ಹಾಡಿರುವುದೂ ಉಂಟು. ಈವರೆಗೆ ಒಂದಷ್ಟು ಹಾಡುಗಳನ್ನು ಹಾಡಿದ್ದ ಸದ್ಗುಣ ಮೂರ್ತಿ ಅವರು, ಬಹಳ ವರ್ಷಗಳ ಬಳಿಕ ಮಗನ ಚಿತ್ರಕ್ಕೆ ಹಾಡಿದ್ದಾರೆ. ನಿರ್ದೇಶಕ ಭರತ್ ಎಸ್.ನವುಂದ ಅವರು ಬರೆದಿರುವ “ಇದು ಬ್ರಹ್ಮನ ಹಿಡಿ ಶಾಪನ ಇದು ನ್ಯಾಯನಾ, ಪ್ರತಿ ಹಾಳೆಗು ಪ್ರತಿ ಹಾದಿಲು ಪ್ರತಿ ಕಾರಣ…’ ಎಂಬ ಹಾಡನ್ನು ಹಾಡಿದ್ದಾರೆ. ಈಗಾಗಲೇ ಯುಟ್ಯೂಬ್‌ನಲ್ಲಿ ಹಾಡಿಗೆ ಮೆಚ್ಚುಗೆ ಸಿಕ್ಕಿದೆ.
ಹಾಡು ಕೇಳಿದವರಿಗೆ ಎಲ್ಲೋ ಒಂದು ಕಡೆ ಇಳೆಯರಾಜ ಅವರ ಧ್ವನಿ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತೆ. ಅಂಥ ಕಂಠ ಹೊಂದಿರುವ ಸದ್ಗುಣ ಮೂರ್ತಿ ಅವರು ಈ ವಯಸ್ಸಲ್ಲೂ ತುಂಬಾ ಗಂಭೀರವಾಗಿರುವ ಸಾಹಿತ್ಯದಲ್ಲಿ ಫಿಲಾಸಫಿ ತುಂಬಿರುವ ಹಾಡನ್ನು ಹಾಡುವ ಮೂಲಕ ಮಗನ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ. ಅಂದಹಾಗೆ, ಸಂಗೀತ ನಿರ್ದೇಶಕ ಕಮ್ ನಾಯಕ ಪ್ರದೀಪ್ ವರ್ಮ ಅವರು, ಈ ಹಾಡಿಗೆ ರಾಗವನ್ನು ಸಂಯೋಜಿಸುವ ವೇಳೆ, ಹೊಸ ಫೀಲ್ ತುಂಬುವ ವಾಯ್ಸ ಬೇಕು ಎಂದು ನಿರ್ದೇಶಕರ ಜೊತೆ ಚರ್ಚಿಸಿದ್ದಾರೆ.
ಆ ಸಮಯದಲ್ಲೇ ಅವರ ತಂದೆ ಎಂಟ್ರಿಕೊಟ್ಟಿದ್ದಾರೆ. ಒಮ್ಮೆ ಹಾಡಿಬಿಡಿ ಅಂತ ಕೇಳಿಕೊಂಡಿದ್ದಾರೆ. ತುಂಬ ವರ್ಷಗಳ ಬಳಿಕ ಒಂದೊಮ್ಮೆ ಪ್ರಯತ್ನ ಮಾಡೋಣ ಅಂತ ರೆಕಾರ್ಡಿಂಗ್ ಸ್ಟುಡಿಯೋ ಒಳಗೆ ಹೋದ ಸದ್ಗುಣ ಮೂರ್ತಿ ಪಲ್ಲವಿ ಹಾಡಿದ್ದಾರೆ. ನಿರ್ದೇಶಕರಿಗೆ ಅದು ಇಷ್ಟವಾಗಿದ್ದೇ ತಡ, ಪೂರ್ಣ ಹಾಡು ಹಾಡಿಸಿ, ಇದೀಗ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಹೈ ಪಿಚ್‌ನಲ್ಲಿರುವ ಈ ಹಾಡನ್ನು ಕೇವಲ ಮೂರು ತಾಸುಗಳಲ್ಲಿ ಹಾಡಿದ್ದಾರಂತೆ ಸದ್ಗುಣಮೂರ್ತಿ. “ಅಡಚಣೆಗಾಗಿ ಕ್ಷಮಿಸಿ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಇಷ್ಟರಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.