ಅಳ್ನಾವರ: ಬೆಳಗಾವಿ ಮತ್ತು ದಾಂಡೇಲಿ ಮಾರ್ಗ ಜೋಡಿಸುವ ಪ್ರಮುಖ ಕೊಂಡಿಯಾದ ಅಳ್ನಾವರ ರೈಲು ನಿಲ್ದಾಣಕ್ಕೆ ಮೂಲಸೌಲಭ್ಯ ಒದಗಿಸಲು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ಸ್ಥಳೀಯರು ಮನವಿ ಮಾಡಿದರು.
ಬೆಳಗಾವಿಯಿಂದ ಹುಬ್ಬಳ್ಳಿವರೆಗಿನ ಜೋಡಿ ರೈಲು ಮಾರ್ಗ ಪರಿಶೀಲನೆ ಮಾಡಲು ರವಿವಾರ ವಿಶೇಷ ರೈಲು ಮೂಲಕ ಹೊರಟಿದ್ದ ಸಚಿವ ಅಂಗಡಿ ಮಧ್ಯಾಹ್ನ ಇಲ್ಲಿನ ರೈಲು ನಿಲ್ದಾಣದಲ್ಲಿ ನಿಂತು ಪ್ರಯಾಣಿಕರ ಅಹವಾಲು ಆಲಿಸಿದರು.
ಅಳ್ನಾವರ ನಿಲ್ದಾಣವು ಈ ಭಾಗದ ಪ್ರಮುಖ ರೈಲ್ವೆ ಜಂಕ್ಷನ್ ಆಗಿದೆ. ನೈಋತ್ಯ ರೈಲ್ವೆ ಕಚೇರಿಯಿಂದ ತೀರಾ ಹತ್ತಿರ ಇದೆ. ಗೋವಾ ರಾಜ್ಯಕ್ಕೆ ಪ್ರಯಾಣಿಸಲು ಹುಬ್ಬಳ್ಳಿಯಿಂದ ಯಾವುದೇ ರೈಲು ಇಲ್ಲ. ರಾಮನಗರ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿದ್ದು, ಈ ಭಾಗದ ಪ್ರಯಾಣಿಕರು ಸುತ್ತುವರಿದು ಗೋವಾ ಪ್ರವಾಸ ಮಾಡುವ ಅನಿವಾರ್ಯತೆ ಇದೆ. ಹಾಗಾಗಿ ಹುಬ್ಬಳ್ಳಿಯಿಂದ ಗೋವಾಗೆ ಹೊಸ ರೈಲು ಸೇವೆ ಆರಂಭಿಸಿ ಎಂದು ಸಚಿವರಲ್ಲಿ ಮನವಿ ಮಾಡಲಾಯಿತು.
ಅಳ್ನಾವರ ರೈಲು ನಿಲ್ದಾಣದಲ್ಲಿ ಸಾಕಷ್ಟು ಕುಂದುಕೊರತೆಗಳು ಇವೆ. 2ನೇ ಪ್ಲಾಟ್ಫಾರ್ಮ್ಗೆ ಮೇಲ್ಛಾವಣಿ ನಿರ್ಮಿಸಬೇಕು. ಪಶ್ವಿಮ ಭಾಗದಲ್ಲಿ ರೈಲು ಮಾರ್ಗದಲ್ಲಿ ಮೇಲ್ಸೇತುವೆ ನಿರ್ಮಿಸಬೇಕು ಮತ್ತು ಅಂಗವಿಕಲರು, ವೃದ್ಧರು ದಾಟಲು ವಿಶೇಷ ಪ್ಲಾಟ್ಫಾರ್ಮ್ ನಿರ್ಮಾಣ ಮಾಡಬೇಕು. ಎಲ್ಲ ಎಕ್ಸ್‌ಪ್ರೆಸ್ ಟ್ರೇನುಗಳನ್ನು ಇಲ್ಲಿ ನಿಲುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ದಾಂಡೇಲಿ ರೈಲು ಮಾರ್ಗವನ್ನು ತಕ್ಷಣವೇ ಆರಂಭಗೊಳಿಸಿ ಹುಬ್ಬಳ್ಳಿ-ದಾಂಡೇಲಿ ರೈಲು ಸಂಚಾರ ಆರಂಭಿಸಬೇಕು. ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಪಡೆಯಲು ಮತ್ತೂಂದು ಕೌಂಟರ್ ತರೆಯಬೇಕು. ಮುಂಗಡ ಟಿಕೆಟ್ ಕಾಯ್ದಿರಿಸಲು ಪತ್ಯೇಕ ಕೌಂಟರ್ ಬೇಕು. ರೈಲು ಮಾಹಿತಿ ಪಡೆಯಲು ದೂರವಾಣಿ ಕರೆ ಮಾಡಿದರೆ ಕರ್ತವ್ಯದ ಮೇಲಿರುವ ಬೇರೆ ರಾಜ್ಯದ ಕನ್ನಡ ಬಾರದ ಸಿಬ್ಬಂದಿ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ದೂರು ನೀಡಲಾಯಿತು.
ಅಹವಾಲುಗಳನ್ನು ಆಲಿಸಿದ ಸಚಿವ ಅಂಗಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್, ಪಪಂ ಸದಸ್ಯರಾದ ಛಗನಲಾಲ ಪಟೇಲ, ಅಮೂಲ ಗುಂಜೀಕರ, ರಮೇಶ ಕುನ್ನೂರಕರ, ತಮೀಮ ತೇರಗಾಂವ ಮತ್ತು ಎಂ.ಸಿ. ಹಿರೇಮಠ, ಎಂ.ಎಂ. ತೇಗೂರ, ಅನ್ವರಖಾನ ಬಾಗೇವಾಡಿ, ಸತ್ತಾರ ಬಾತಖಂಡಿ, ಪ್ರವೀಣ ಪವಾರ, ಸುರೇಂದ್ರ ಕಡಕೋಳ, ಬಾಬು ಲಿಂಗನಮಠ, ನಿಸಾರ ಖತೀಬ ಇದ್ದರು.