ರಾಮನಗರ: ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ ತಾಲೂಕಿನ ಬಿಡದಿ ಹೋಬಳಿ ಕಂಚುಗಾರನಹಳ್ಳಿ ,ಗ್ರಾಮದಲ್ಲಿ ನಿರ್ಮಿಸಿರುವ ಶಾಲೆಯ ಕಟ್ಟಡಕ್ಕೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿಕೊಡುವಂತೆ ಬಿಡದಿ ಕೈಗಾರಿಕಾ ಸಂಘಕ್ಕೆ ಮನವಿ ಮಾಡುವುದಾಗಿ ಶಾಸಕ ಎ.ಮಂಜುನಾಥ್ ತಿಳಿಸಿದರು.
ಕಂಚುಗಾರನಹಳ್ಳಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ 2 ಕೊಠಡಿಗಳ ಸರ್ಕಾರಿ ಶಾಲೆಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು,ದಾಖಲಾತಿ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಕೊಠಡಿಗಳನ್ನು ಸಿ.ಎಸ್. ಆರ್.ನಿಧಿಯಲ್ಲಿ ನಿರ್ಮಿಸಿಕೊಡಲು ಕೈಗಾರಿಕೆಗಳಿಗೆ ಮನವಿ ಮಾಡುವುದಾಗಿ ತಿಳಿಸಿದ್ದು, ಕಾಂಪೌಂಡ್ ಗೋಡೆ ಎತ್ತರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಬಹುತೇಕ ಶಾಲಾ ಕಟ್ಟಡಗಳ ಮೇಲ್ಚಾವಣಿಗೆ ಚುರುಕಿಹಾಕದೆ ಬಿಡುತ್ತಿರುವುದರಿಂದ ಅಲ್ಪಾವಧಿಯಲ್ಲಿಯೇ ಕಟ್ಟಡಗಳು ಶಿಥಿಲವಾಗುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶಾಸಕರು, ಶಾಲಾ ಕಟ್ಟಡಗಳಿಗೆ ಚುರುಕಿ ಹಾಕುವುದು ಕಡ್ಡಾಯವಾಗಬೇಕು ಎಂದರು. ಶಾಲಾ ಕಟ್ಟಡ ಕಾಮಗಾರಿ ಬಗ್ಗೆ ಮುತುವರ್ಜಿ ವಹಿಸಿದ ಗ್ರಾಮಸ್ಥರ ಬಗ್ಗೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಕಂಚುಗಾರನಹಳ್ಳಿ ಆಯ್ಕೆಯಾಗಿದ್ದು, ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಜಿಪಂ ತಾಪಂ ಮತ್ತು ತಮ್ಮ ಶಾಸಕ ನಿಧಿಗಳನ್ನು ಸಮರ್ಪಕವಾಗಿ ಬಳಕೆ ಮಾಡಲಾಗಿದೆ. ಬೀದಿ ದೀಪ ನಿರ್ವಹಣೆ, ಸ್ವತ್ಛತೆ ಕಾಪಾಡುವುದು ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಪರಿಹಾರ ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಿಎಂ ಆಗಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವ ವಹಿಸಿದ್ದ ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಬಿಡದಿ ಹೋಬಳಿ ಅಭಿವೃದ್ಧಿಗೆ 40 ಕೋಟಿಗಳ ಅನುದಾನ ಬಿಡುಗಡೆ ಮಾಡಿದ್ದರು. ಈಗಿನ ಬಿಜೆಪಿ ಸರಕಾರ ಆದನ್ನು ತಡೆ ಹಿಡಿದಿದೆ. ಆದರೆ ತಾವು ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ 40 ಕೋಟಿ ಜೊತೆಗೆ 30 ಕೋಟಿ ರೂಗಳ ಯೋಜನೆ ಸೇರಿಸಿ 70 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಭೈರಮಂಗಲ, ಇಟ್ಟಮಡು, ಹೆಗ್ಗಡಗೆರೆ ಮುಂತಾದ ಗ್ರಾಮಗಳ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಜಿಪಂ ಸದಸ್ಯ ಎಂ.ಎನ್.ಮಂಜುನಾಥ್, ಬೈರ ಮಂಗಲ ವಿಎಸ್‌ಎಸ್‌ಎನ್ ಅಧ್ಯಕ್ಷ ಎಚ್.ಎಸ್. ಸಿದ್ದರಾಜು, ಗ್ರಾಪಂ ಸದಸ್ಯ ಶಿವರಾಮು, ಮುಖಂಡರಾದ ಇಟ್ಟಮಡು ಬಿ.ಗೋಪಾಲ್, ರಾಮಯ್ಯ, ಹನುಮಂತು, ನಾಗರಾಜು, ಕಂಚುಗಾರನಹಳ್ಳಿ ಗ್ರಾಪಂ ಪಿಡಿಒ ರಾಮಕೃಷ್ಣಯ್ಯ, ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.