ವಿಜಯಪುರ: ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ಥೆರಪಿ ಪ್ರಾರಂಭಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಗುರುವಾರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸೋಂಕಿತರ ಸಾವಿನ ಸಂಖ್ಯೆ ನಿಯಂತ್ರಿಸಲು ಕೊರೊನಾ ಸೋಮಕು ರೋಗದಿಂದ ಗುಣಮುಖರಾಗಿ ಮನೆಗೆ ಮರಳಿದವರು ಸ್ವಯಂ ಪ್ರೇರಿತರಾಗಿ ಪ್ಲಾಸ್ಮಾ ನೀಡಲು ಬರುವುದಾಗಿ ತಿಳಿಸಿದ್ದಾರೆ.
ಹೀಗಾಗಿ ವಿಜಯಪುರ ಜಿಲ್ಲೆಯಲ್ಲಿ ಪ್ಲಾಸ್ಮಾ ಥೆರಪಿ ಪ್ರಾರಂಭಿಸಿ ಕೊರೊನಾ ರೋಗ ಪೀಡಿತರಿಗೆ ಚಿಕಿತ್ಸೆ ನೀಡಲು ಪ್ಲಾಸ್ಮಾ ಸಂಗ್ರಹಕ್ಕೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆಆದೇಶಿಸಬೇಕು. ಜಿಲ್ಲಾಡಳಿತವೇ ಈ ಕುರಿತು ವಿಶೇಷ ಕಾಳಜಿ ವಹಿಸಬೇಕು ಎಂದು ಆಗ್ರಹಿಸಿದರು.
ಅಪರ ಜಿಲ್ಲಾಧಿಕಾರಿ ಡಾ| ಔದ್ರಾಮ ಮನವಿ ಸ್ವೀಕರಿಸಿ ಮಾತನಾಡಿ, ಪ್ಲಾಸ್ಮಾ ಥೆರಪಿ ಪ್ರಾರಂಭಿಸುವ ಬಗ್ಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಪಚಾರ ನೀಡಲು ಹಿಂದೇಟು ಹಾಕುತ್ತಿರುವ ವಿಷಯ ಗಮನಕ್ಕೆ ಬಂದಿಲ್ಲ. ಇಂತ ಪ್ರಕರಣಗಳು ವರದಿಯಾದಲ್ಲಿ ತಕ್ಷಣ ಕ್ರಮಕ್ಕೆ ಮುಂದಾಗುವ ಭರವಸೆ ನೀಡಿದರು.
ಸುರೇಶಗೌಡ (ತೊರವಿ), ಅಬ್ದುಲ್ ರಜಾಕ್ ಹೊರ್ತಿ, ಕೈಸರ್ ಇನಾಮದಾರ, ಈರಪ್ಪ ಕುಂಬಾರ, ಇರ್ಫಾನ್ ಶೇಖ್, ಜಯೀಮ್ ಇನಾಮದಾರ, ಮನ್ಸೂರ್ ಇನಾಮದಾರ, ಅಲ್ತಾಫ್ ಬಾಂಬೆವಾಲೆ, ಅರ್ಜುನ ಕಾಳೆ, ಎಂ.ಬಿ.ದರ್ಗಾ, ಮನೋಜ್ ಉತ್ನಾಳ, ಅಲ್ಲಾಭಕ್ಷ ಮುಲ್ಲಾ ಇದ್ದರು.