ರಾಯಚೂರು: ತಾಲೂಕಿನ ಚಿಕ್ಕಸೂಗೂರು ರೈಲು ನಿಲ್ದಾಣದಲ್ಲಿ ವೇಗಧೂತ ರೈಲುಗಳ ನಿಲುಗಡೆಗೆ ಅನುಮತಿ ನೀಡುವಂತೆ ಒತ್ತಾಯಿಸಿ ಈ ಭಾಗದ ಮುಖಂಡರ ನಿಯೋಗವು ದೆಹಲಿಯಲ್ಲಿ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿಗೆ ಸೋಮವಾರ ಮನವಿ ಸಲ್ಲಿಸಿತು.
ಚಿಕ್ಕಸೂಗೂರು ರೈಲು ನಿಲ್ದಾಣದಲ್ಲಿ ಉದ್ಯಾನ್, ಲಿಂಕ್ ಹಾಗೂ ಮೇಲ್ ಎಕ್ಸ್‌ಪ್ರೆಸ್ ನಿಲುಗಡೆಗೆ ಅನುಮತಿ ನೀಡಬೇಕು. ದೇವಸೂಗೂರು, ಚಿಕ್ಕಸೂಗೂರು, ಯದ್ಲಾಪುರ, ಕಾಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಕ್ಷಾಂತರ ಜನಸಂಖ್ಯೆ ಇದ್ದು, ಅವರಿಗೆಲ್ಲ ಈ ನಿಲ್ದಾಣ ಹತ್ತಿರವಾಗಲಿದೆ. ಇಲ್ಲಿ ರೈಲು ನಿಲುಗಡೆ ಮಾಡದಿದ್ದಲ್ಲಿ ಗ್ರಾಮೀಣ ಭಾಗದಿಂದ ಬರುವವರು 18 ಕಿ.ಮೀ. ದೂರದ ರಾಯಚೂರು ರೈಲು ನಿಲ್ದಾಣಕ್ಕೆ ತೆರಳಬೇಕಿದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.
ಈ ಭಾಗದಲ್ಲಿ ಐತಿಹಾಸಿಕ ಶ್ರೀ ಸೂಗೂರೇಶ್ವರ ದೇವಸ್ಥಾನವಿದ್ದು, ರಾಜ್ಯ ಸೇರಿ ನೆರೆ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ವೈಟಿಪಿಎಸ್, ಆರ್‌ಟಿಪಿಎಸ್ ಸೇರಿದಂತೆ ಅನೇಕ ಕೈಗಾರಿಕೆಗಳಿರುವ ಕಾರಣ ನಾನಾ ಭಾಗದಿಂದ ಜನರು ಆಗಮಿಸುತ್ತಾರೆ. ಅವರೆಲ್ಲರೂ ರಾಯಚೂರು ನಿಲ್ದಾಣದಿಂದಲೇ ಬರಬೇಕಿದೆ. ಇದು ಮೂರ್‍ನಾಲ್ಕು ಪಂಚಾಯಿತಿಗಳಿಗೆ ಮಧ್ಯದಲ್ಲಿದ್ದು, ಇಲ್ಲಿ ರೈಲು ನಿಲುಗಡೆಯಾದಲ್ಲಿ ಹೋಗಿ ಬರುವವರಿಗೂ ಅನುಕೂಲವಾಗಲಿದೆ.ಕೆಲವೊಮ್ಮೆ ರೈಲುಗಳು ತಡವಾಗಿ
ಬಂದಲ್ಲಿ ಸ್ವ ಗ್ರಾಮಗಳಿಗೆ ತೆರಳಲು ಸೂಕ್ತ ವಾಹನಗಳೇ ಸಿಗದೆ ಪರದಾಡುವ ಸ್ಥಿತಿ ಎದುರಾಗಲಿದೆ. ಈ ಎಲ್ಲಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಿಕ್ಕಸೂಗೂರು ನಿಲ್ದಾಣದಲ್ಲಿ ರೈಲು ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಿಯೋಗದಲ್ಲಿ ಮುಖಂಡ ಡಾ| ಪ್ರಕಾಶಯ್ಯ ನಂದಿ, ಶ್ರೀ ಸೂಗೂರೇಶ್ವರ ದೇವಸ್ಥಾನ ಸಮಿತಿ ಸದಸ್ಯ ಶಾಂತವೀರೇಶ ನಂದಿಕೋಲ, ಸಿದ್ದನಗೌಡ ಚಿನ್ನಾಕರ, ತ್ರಿಪುರಾಂತಯ್ಯ ಮರುಳ, ಸುರೇಶ ಮಾನ್ವಿ, ಸುರೇಶ ಮಟಮಾರಿ, ಸಿ.ಭಾಸ್ಕರ, ರಾಕೇಶಕುಮಾರ, ರವಿಕುಮಾರ ಮಡಿವಾಳ ಇದ್ದರು.