ವಿಜಯಪುರ: ಕೂಡಗಿ ರೈಲ್ವೆ ನಿಲ್ದಾಣದ ಹತ್ತಿರ ಎರಡು ದಿನಗಳ ಹಿಂದೆ ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹರಿದು 96 ಕುರಿಗಳು ಸಾವಿಗೀಡಾಗಿವೆ. ಇದರಿಂದ ಕುರಿಗಳನ್ನು ಕಳೆದುಕೊಂಡಿರುವ ಕುರಿಗಾರರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಜಿಲ್ಲಾ ಕುರಿಗಾರರ ಸಂಘದಿಂದ ಮನವಿ ಸಲ್ಲಿಸಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ| ವಿ.ಬಿ. ದಾನಮ್ಮನವರ ಅವರನ್ನು ಭೇಟಿ ಮಾಡಿದ ಜಿಲ್ಲಾ ಕುರಿಗಾರರ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು, ರೈಲು ಅಪಘಾತ ಪ್ರಕರಣದಲ್ಲಿ ಕುರಿಗಳನ್ನು ಕಳೆದುಕೊಂಡ ನಾಲ್ಕು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಸಮಸ್ಯೆ ನಿವೇದಿಸಿದರು.
ಕುರಿಗಾರರಾದ ಶೇಖಪ್ಪ ಮೂಕನವರ, ಕಲ್ಲಪ್ಪ ಮೂಕನವರ, ಚಂದಪ್ಪ ಕರಿಗಾರ ಮತ್ತು ಮಲ್ಲಪ ಕಾಡಸಿದ್ಧ ಎಂಬುವರಿಗೆ ಸೇರಿದ ಒಟ್ಟು 96 ಕುರಿಗಳು ರೈಲು ಅಪಘಾತದಿಂದ ಸಾವಿಗೀಡಾಗಿವೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಈ ಕುಟುಂಬಗಳು ಮಾನಸಿಕವಾಗಿ ಜರ್ಜರಿತವಾಗಿವೆ. ಜೀವನ ನಿರ್ವಹಣೆಗೂ ಸಂಕಷ್ಟ ಎದುರಿಸುತ್ತಿರುವ ಕಾರಣ ತ್ವರಿತವಾಗಿ ಪರಿಹಾರ ನೀಡಬೇಕೆಂದು ಅವರಿಗೆ ಮನವಿ ಮಾಡಿತು.
ಸರ್ಕಾರದ ನಿಯಮದಂತೆ ತ್ವರಿತವಾಗಿ ಅಗತ್ಯ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಬಾಧಿತ ಕುಟುಂಬಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ| ದಾನಮ್ಮವನರ ಭರವಸೆ ನೀಡಿದರು.
ಸೋಮನಾಥ ಕಳ್ಳಿಮನಿ, ಜಿಲ್ಲಾ ಕುರುಬರ ಸಂಘದ ದೇವಕಾಂತ ಬಿಜ್ಜರಗಿ, ಜಿಲ್ಲಾ ಕುರಿಗಾರ ಸಂಘದ ಅಧ್ಯಕ್ಷ ಬೀರಪ್ಪ ಜುಮನಾಳ, ರಾಜೇಶ್ವರಿ ಯರನಾಳ, ರಾಜು ಯರನಾಳ, ಬಸವರಾಜ ಕಂಕಣವಾಡಿ ಸೇರಿದಂತೆ ಇತರರು ಇದ್ದರು.