Advertisement

ಸರಳ ಗಣೇಶೋತ್ಸವಕ್ಕೆ ಮನವಿ

10:05 AM Aug 26, 2019 | Suhan S |

ಬಾಗಲಕೋಟೆ: ಜಿಲ್ಲೆಯ ಲಕ್ಷಾಂತರ ಜನ ಪ್ರವಾಹಕ್ಕೆ ಒಳಗಾಗಿ ಸಂಕಷ್ಟದಲ್ಲಿರುವುದರಿಂದ ಈ ಬಾರಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬವನ್ನು ಸರಳವಾಗಿ ಶ್ರದ್ಧಾ-ಭಕ್ತಿ ಪೂರ್ವಕವಾಗಿ ಆಚರಿಸಬೇಕೆಂದು ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಮನವಿ ಮಾಡಿದ್ದಾರೆ.

Advertisement

ಜಿಲ್ಲಾಡಳಿತದ ಸಭಾ ಭವನದಲ್ಲಿಂದು ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬಗಳ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿಯ ಗಣೇಶೋತ್ಸವ ಸರಳವಾಗಿ ಆಚರಿಸಿ ನೊಂದ ಜೀವಿಗಳಿಗೆ ಸಹಾಯಹಸ್ತ ನೀಡುವಂತೆ ವಿನಂತಿಸಿದ‌ರು. ವಾಯು ಮಾಲಿನ್ಯ ತಡೆಗೆ ಪಿಒಪಿ ಗಣಪತಿ ಬಳಸದೇ ಕೇವಲ ಮಣ್ಣಿನ ಗಣೇಶ ಮೂರ್ತಿಗಳನ್ನು ಪೂಜಿಸಬೇಕು ಎಂದು ತಿಳಿಸಿದರು.

ಸ್ವಚ್ಛತೆ ಹಾಗೂ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ತಡೆಯಲು ಪಟಾಕಿ ಹಾಗೂ ಕರ್ಕಶ ಧ್ವನಿಯ ಡಿ.ಜೆ ಗಳನ್ನು ಬಳಸಬಾರದು. ಇಡೀ ದೇಶದಲ್ಲಿ ಸ್ವಚ್ಚ ಭಾರತ ಅಭಿಯಾನವು ಚಾಲನೆಯಲ್ಲಿದ್ದು, ಜಿಲ್ಲೆಯ ಸಾರ್ವಜನಿಕರು ಸ್ಚಚ್ಛತೆಯ ಅಭಿಯಾನದಲ್ಲಿ ಕೈ ಜೋಡಿಸಬೇಕು ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಗಣೇಶ ಹಾಗೂ ಮೊಹರಂ ಏಕಕಾಲಕ್ಕೆ ಬಂದಿರುವುದರಿಂದ ಶಾಂತಿ, ಸಹಕಾರದಿಂದ ಸೌಹಾರ್ದಯುತವಾಗಿ ಆಚರಿಸಬೇಕೆಂದು.

Advertisement

ಸಿಮೆಂಟ್ ಕ್ವಾರಿ, ಮಹಾ ರುದ್ರಪ್ಪನ ಹಳ್ಳದಲ್ಲಿ ಸಾರ್ವಜನಿಕರು ಗಣೇಶ ಮೂರ್ತಿಯನ್ನು ರಾತ್ರಿ 10ರ ಒಳಗಾಗಿ ವಿಸರ್ಜಿಸಬೇಕು. ಎಲ್ಲೆಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು ಹಾಗೂ ಸಾರ್ವಜನಿಕ ಗಣೇಶೋತ್ಸವವನ್ನು 5 ಮತ್ತು 7 ದಿನಗಳ ಮಾತ್ರ ಆಚರಿಸಲು ಸೂಚಿಸಿದರು.

ರಾಜು ನಾಯ್ಕರ ಮಾತನಾಡಿ, ಮದ್ಯ ಮಾರಾಟ ನಿಷೇಧ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಎಮ್‌.ಎಸ್‌.ಆಯ್‌.ಎಲ್ ತೆರೆದಿರುತ್ತವೆ. ಈ ಬಗ್ಗೆ ಪೊಲೀಸ್‌ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.

ಎಂ.ಎ. ದಂಡಿಯಾ ಮಾತನಾಡಿ ಮಾತನಾಡಿ. ಸೆ. 5ರಂದು ಹಾಗೂ 10ರಂದು ಮೊಹರಂ ನಿಮಿತ್ತ ನಗರದ ಪಂಖಾ ಮಸೀದಿ ಹತ್ತಿರ ಪಂಜಾಗಳು ಕೂಡುವ ಹಿನ್ನೆಲೆಯಲ್ಲಿ ಜನ ದಟ್ಟಣೆಯಾಗುವುದರಿಂದ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು. ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಪ್ರೊಬೆಷನರಿ ಐಎಎಸ್‌ ಅಧಿಕಾರಿ ಗರಿಮಾ ಪವ್ವಾರ, ಉಪ ವಿಭಾಗಾಧಿಕಾರಿ ಎಚ್.ಜಯಾ, ಮಾಧವ ಸೇವಾ ಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ, ಮುಖಂಡರಾದ ಮಾಧವಿ ರಾಠೊಡ, ಹನುಮಂತ ನಾರಾಯಣಿ, ಜ್ಯೋತಿ ಭಜಂತ್ರಿ, ಎನ್‌.ಜಿ.ಪವಾರ, ಮನೋಹರ ಎಳ್ಳೆಮ್ಮಿ, ವೈ.ಜೆ. ಪಠಾಣ, ಹಾಜಿಸಾಬ ದಂಡಿನ್‌, ಶಪೀಕ ದೊಡಕಟ್ಟಿ ಉಪಸ್ಥಿತರಿದ್ದರು.

ಪ್ರವಾಹದಿಂದ ಜಿಲ್ಲೆಯ 194 ಹಳ್ಳಿಗಳ ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಈ ಬಾರಿಯ ಗಣೇಶೋತ್ಸವವನ್ನು ಸರಳವಾಗಿ ಆಚರಿಸುವ ಜತೆಗೆ ಸಂತ್ರಸ್ತರ ಸಂಕಷ್ಟದಲ್ಲಿ ನಾವೆಲ್ಲ ಭಾಗಿಯಾಗೋಣ. ಅಲ್ಲದೇ ಈ ಬಾರಿ ವಿಶ್ವಸಂಸ್ಥೆಯಲ್ಲಿಯೂ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಭಾರತದ ಸಾಂಸ್ಕೃತಿಕ ಪರಂಪರೆ ಸಂಪ್ರದಾಯ ಎತ್ತಿ ಹಿಡಿದಂತಾಗಿದೆ. •ಆರ್‌. ರಾಮಚಂದ್ರನ್‌, ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿಗಳ ಮನಿವಿಯಂತೆ ಸಂತ್ರಸ್ತರ ನೋವಿನಲ್ಲಿ ಭಾಗಿಯಾಗಿ ಸರಳವಾದ ಗಣೇಶೋತ್ಸವ ಆಚರಣೆಗೆ ಸಹಕಾರ ನೀಡುತ್ತೇವೆ. ಶಹರ ಗಜಾನನ ಮಂಡಳಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಲಕ್ಷ ರೂ ನೀಡಲಾಗುವುದು. •ಅಶೋಕ ಲಿಂಬಾವಳಿ, ಗಣೇಶೋತ್ಸವ ಆಚರಣೆ ಸಮಿತಿ ಮುಖಂಡ
Advertisement

Udayavani is now on Telegram. Click here to join our channel and stay updated with the latest news.

Next