Advertisement

ನ್ಯಾಯಯುತ ಬೇಡಿಕೆ ಈಡೇರಿಸಲು ಮನವಿ

05:04 PM Mar 15, 2022 | Shwetha M |

ವಿಜಯಪುರ: ಅಂಗನವಾಡಿ ನೌಕರರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಸರ್ಕಾರ-ನೌಕರರ ನಡುವೆ ಉದ್ಭವಿಸಿರುವ ಬಿಕ್ಕಟ್ಟು ಬಗೆಹರಿಸಲು ಹಾಗೂ ಹೋರಾಟ ನಿರತ ಮಹಿಳಾ ಕಾರ್ಮಿಕರ ಮೇಲೆ ನಡೆಯುತ್ತಿರುವ ಪೊಲೀಸ್‌ ದೌರ್ಜನ್ಯ ನಿಲ್ಲಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಐಯುಟಿಯುಸಿ ಹಾಗೂ ಸ್ಕೀಂ ವರ್ಕರ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

ಈ ವೇಳೆ ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಕೆ.ಸೋಮಶೇಖರ ಯಾದಗಿರಿ ಮಾತನಾಡಿ, ಪ್ರಧಾನ ಮಂತ್ರಿಗಳ ಘೋಷಣೆಯಂತೆ ಹೆಚ್ಚುವರಿ ಗೌರವ ಧನ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ಶೇ. 60 ಹಣವನ್ನು ಹರಿಯಾಣ ಸರ್ಕಾರಕ್ಕೆ ಹಸ್ತಾಂತರಿಸಿದರೂ ರಾಜ್ಯ ಸರ್ಕಾರ ಈ ಗೌರವಧನದ ಹಣವನ್ನು ಅಂಗನವಾಡಿ ನೌಕರರಿಗೆ ನೀಡುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಅನೇಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಾವನ್ನಪ್ಪಿದ್ದಾರೆ. ಸರ್ಕಾರ ಈವರೆಗೂ ಸಂತ್ರಸ್ತ ಕುಟುಂಬಗಳಿಗೆ ಒಂದೇ ಒಂದು ಪೈಸೆ ಮಂಜೂರು ಮಾಡಿಲ್ಲ. ವಿಧಾನ ಸೌಧದಲ್ಲಿ ಘೋಷಣೆ ಮಾಡಿರುವುದೂ ಸೇರಿದಂತೆ ಯಾವುದೇ ಬೇಡಿಕೆಗಳಿಗೆ ವರ್ಷಗಳು ಕಳೆದರೂ ಪರಿಹಾರ ನೀಡಿಲ್ಲ. ಹಾಗಾಗಿ ಅಂಗನವಾಡಿ ಕಾರ್ಯಕರ್ತೆಯರು ಅನಿವಾರ್ಯವಾಗಿ ಹೋರಾಟಕ್ಕೆ ಇಳಿದಿದ್ದಾರೆ. ಅವರ ಬೇಡಿಕೆಗಳು ನ್ಯಾಯಯುತವಾಗಿದ್ದು ಸರ್ಕಾರ ಅವುಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು ಡಿಸೆಂಬರ್‌ 8, 2021ರಿಂದ ಮುಷ್ಕರದಲ್ಲಿದ್ದಾರೆ. ಮೈ ಕೊರೆಯುವ ಛಳಿಯ ನಡುವೆಯೂ ಸಹ ಈ ಬಡ ಮಹಿಳೆಯರು ಉದ್ಯಾನವನಗಳ ಬಯಲಿನಲ್ಲಿ ಧರಣಿ ಕುಳಿತಿದ್ದಾರೆ. ಜನೆವರಿ 12, 2022ರಂದು ಸಮನ್ವಯ ಸಮಿತಿಯ ಕರೆಯ ಮೇರೆಗೆ ಹರಿಯಾಣದಾದ್ಯಂತ ನಡೆದ “ಜೈಲ್‌ ಭರೋ ಚಳವಳಿ’ ವೇಳೆ ಸಹಸ್ರಾರು ಜನರ ಬಂಧನ ನಡೆಯಿತು.

ಬಹುತೇಕ ನೌಕರರು ನ್ಯಾಯಾಂಗ ಬಂಧನಕ್ಕೊಳಗಾದರು. ಫೆಬ್ರವರಿ 14ರಿಂದ ಕರ್ನಾಲ್‌ ನಲ್ಲಿ ರಾಜ್ಯಮಟ್ಟದ ಮಹಾಪಧವ್‌ (ಮಹಾನಡಿಗೆ) ನಡೆಯುತ್ತಿದೆ. ಮಾರ್ಚ್‌ 3, 2022ರಂದು ಹೋರಾಟನಿರತ ಕಾರ್ಮಿಕರು “ಅಸೆಂಬ್ಲಿ ಛಲೋ’ ಆಯೋಜಿಸಿದರು. ಈ ಚಳವಳಿಯನ್ನು ವಿಫಲಗೊಳಿಸಲು ಹರಿಯಾಣ ಸರ್ಕಾರ ದಮನಕಾರಿ ಕ್ರಮಗಳನ್ನು ಅನುಸರಿಸಿತು. ಪೊಲೀಸರು ಬಡ ಮಹಿಳಾ ಕಾರ್ಮಿಕರನ್ನು ಅವರ ಗಮ್ಯಸ್ಥಾನಕ್ಕೆ ಹೋಗದಂತೆ ಬಲವಂತವಾಗಿ ತಡೆದರು. ಅಮಾನವೀಯವಾಗಿ ಜಗಳವಾಡಿದರು, ನಿಂದಿಸಿದರು. ಬಂಧಿಸಿ ಅವರನ್ನು ಅವರ ಊರುಗಳಿಂದ ಮೈಲುಗಳಷ್ಟು ದೂರ ಒಯ್ದು ಎಸೆಯಲಾಯಿತು.

ಕಾರ್ಮಿಕರು ಬಾಡಿಗೆಗೆ ಪಡೆದಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ವಿರುದ್ಧ ಹಲವೆಡೆ ಸುಳ್ಳು ಪ್ರಕರಣಗಳೂ ದಾಖಲಾಗಿವೆ. ಇಂತಹ ಪೊಲೀಸ್‌ ಕ್ರಮದ ವಿರುದ್ಧ ಮಾರ್ಚ್‌ 5ರಂದು ಎಲ್ಲ ಜಿಲ್ಲೆಗಳ ಪೊಲೀಸ್‌ ಅಧೀಕ್ಷಕರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಯವರ ಪ್ರತಿಕೃತಿ ದಹಿಸಲಾಯಿತು.

Advertisement

ನ್ಯಾಯಯುತ ಬೇಡಿಕೆಗಳನ್ನು ಪರಿಗಣಿಸಿ ಅವುಗಳನ್ನು ಪರಿಹರಿಸುವ ಬದಲಾಗಿ, ಹರಿಯಾಣ ಸರ್ಕಾರ ಕಳೆದ 3 ತಿಂಗಳಿಂದ ನೌಕರರ “ಗೌರವ ಧನ’ ನಿಲ್ಲಿಸಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ. ಸುಮಾರು 450ಕ್ಕೂ ಹೆಚ್ಚು ಕಾರ್ಯಕರ್ತೆಯರನ್ನು ಈಗಾಗಲೇ ಕೆಲಸದಿಂದ ವಜಾ ಮಾಡಲಾಗಿದೆ. ಇನ್ನೂ ನೂರಾರು ಕಾರ್ಯಕರ್ತೆಯರಿಗೆ ಸೇವೆ ಯಿಂದ ವಜಾಗೊಳಿಸುವ ನೋಟಿಸ್‌ ಜಾರಿ ಮಾಡುತ್ತಿದೆ. ಈ ಬಡ ಮಹಿಳಾ ನೌಕರರ ಮೇಲೆ ಪೊಲೀಸ್‌ ದಬ್ಟಾಳಿಕೆ ಸೇರಿದಂತೆ ಇತರ ದಮನಕಾರಿ ಕ್ರಮಗಳನ್ನು ಅನುಸರಿಸುತ್ತಿದೆ. ಇದರ ವಿರುದ್ಧ ಕಾರ್ಯಕರ್ತೆಯರು ಹೋರಾಟ ಮುಂದುವರಿಸಬೇಕು ಎಂದು ಕರೆ ನೀಡಿದರು.

ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಸರ್ಕಾರ ಬಡ ಮಹಿಳಾ ಕಾರ್ಮಿಕರ ಮೇಲೆ ಎಸಗುತ್ತಿರುವ ಎಲ್ಲ ದಮನಕಾರಿ ಕ್ರಮಗಳನ್ನು ನಿಲ್ಲಿಸಬೇಕು. ಈಗಾಗಲೇ ವಜಾಗೊಳಿಸಿದವರನ್ನು ಬೇಷರತ್ತಾಗಿ ಕೂಡಲೇ ಸೇವೆಗೆ ನಿಯೋಜಿಸಬೇಕು. ಅವರ ಬಹುದಿನಗಳ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಸೌಹಾರ್ದಯುತ ಪರಿಹಾರ ಮಾರ್ಗ ಅನುಸರಿಸಲು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಿಂಗಮ್ಮ ಮಠ, ಜಯಶ್ರೀ ಹಿರೇಮಠ, ಸುಮಂಗಲಾ ಬಾಗೇವಾಡಿ, ಲಲಿತ ಪವಾರ, ಲಕ್ಷ್ಮೀ ಲಕ್ಷೆಟ್ಟಿ, ಶಾರದಾ ಕಾಖಂಡಕಿ, ಶಾರದಾ ಸಾಲಕ್ಕಿ, ಸವಿತಾ ನಾಗರತ್ತಿ, ಮಹಾದೇವಿ ನಆಗೋಡ, ವಿಜಯಲಕ್ಷ್ಮೀ ಹುಣಶ್ಯಾಲ , ಜನಾಬಾಯಿ ಮಟ್ಯಾಳ, ಜ್ಯೋತಿ ನಡುಗಡ್ಡಿ, ಭಾಗೀರಥಿ ಕೆಂಗಲಗುತ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next