ಮಲ್ಪೆ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಕರಾವಳಿಯ ಎಲ್ಲ ಮೀನುಗಾರರಿಗೆ ಮುಖ್ಯಮಂತ್ರಿಗಳು ಪರಿಹಾರದ ಘೋಷಣೆಯನ್ನು ಮಾಡಬೇಕು ಎಂದು ಸಮಸ್ತ ಮೀನುಗಾರರ ಪರವಾಗಿ ಮಲ್ಪೆ ಮೀನುಗಾರರ ಸಂಘ ಮುಖ್ಯಮಂತ್ರಿಗಳಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರ ಮುಖೇನ ಮನವಿ ನೀಡಿ ಆಗ್ರಹಿಸಿದ್ದಾರೆ.
ಶುಕ್ರವಾರ ಮಲ್ಪೆ ಮೀನುಗಾರಿಕೆ ಬಂದರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೀನುಗಾರರು ಸಂಘವು ತಮ್ಮ ಬೇಡಿಕೆಯನ್ನು ಮಂಡಿಸಿದೆ. ಕಳೆದ ಒಂದು ವರ್ಷದಿಂದ ಪ್ರಾಕೃತಿಕ ವೈಪರೀತ್ಯಾದಿಂದಾಗಿ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ.
ಚಂಡಮಾರುತ, ಮೀನು ಲಭ್ಯವಾಗದೆ ಶೇ.90ರಷ್ಟು ಬೋಟುಗಳು ನಷ್ಟದಲ್ಲಿದೆ. ಇದೀಗ ಲಾಕ್‌ಡೌನ್‌ನಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡು ಮೀನುಗಾರರು ಕಷ್ಟದ ದಿನ ಕಳೆಯುತ್ತಿದ್ದಾರೆ. ಮೀನುಗಾರ ಸಾಲದ ಕಂತಿನ ಮರುಪಾವತಿಗೆ 6 ತಿಂಗಳು ವಿನಾಯಿತಿ ಮತ್ತು 6 ತಿಂಗಳ ಬಡ್ಡಿ ಮನ್ನಾ ಗೊಳಿಸಬೇಕು. ಚಂಡಮಾರುತ ಮತ್ತು ಲಾಕ್‌ಡೌನ್‌ನಿಂದಾಗಿ ಈ ಬಾರಿ ಸರಿಯಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಮಾತ್ರ ಜೂ. 30ರ ವರೆಗೆ ಹೆಚ್ಚುವರಿ ಅವಧಿಯನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಶೋಭಾ ಕರಂದ್ಲಾಜೆ ಮೀನುಗಾರರ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹಾರ ತಂದುಕೊಡುವಲ್ಲಿ ತನ್ನಿಂದ ಗರಿಷ್ಠ ಮಟ್ಟದ ಪ್ರಯತ್ನವನ್ನು ಮಾಡುವುದಾಗಿ ಮೀನುಗಾರರಿಗೆ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್, ಶಾಸಕ ಕೆ. ರಘುಪತಿ ಭಟ್, ಮೀನುಗಾರಿಕೆ ಉಪ ನಿರ್ದೇಶಕ ಕೆ. ಗಣೇಶ್, ಸಹಾಯಕ ನಿರ್ದೇಶಕರಾದ ಶಿವಕುಮಾರ್, ಕಿರಣ್ ಕುಮಾರ್, ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ, ಕಾರ್ಯದರ್ಶಿ ಸುಭಾಸ್ ಮೆಂಡನ್, ರಮೇಶ್ ಕೋಟ್ಯಾನ್, ರಾಮಚಂದ್ರ ಕುಂದರ್, ಸತೀಶ್ ಕುಂದರ್ ಉಪಸ್ಥಿತರಿದ್ದರು.