Advertisement

ತುಳು ನಾಟಕ ಕಲಾವಿದರ ಒಕ್ಕೂಟದಿಂದ ಸಚಿವೆ ಜಯಮಾಲಾ ಅವರಿಗೆ ಮನವಿ

10:33 AM Jul 25, 2018 | |

ಮಹಾನಗರ: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ತುಳು ನಾಟಕ ಕಲಾವಿದರ ಒಕ್ಕೂಟ ಸಂಸ್ಥೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಡಾ| ಜಯಮಾಲಾ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದೆ. ಒಕ್ಕೂಟದ ಅಧ್ಯಕ್ಷ ಕಿಶೋರ್‌ ಡಿ. ಶೆಟ್ಟಿ ಅವರ ನಿಯೋಗವು ಸರ್ಕೀಟ್‌ಹೌಸ್‌ನಲ್ಲಿ ಭೇಟಿ ಮಾಡಿ ತುಳುರಂಗಭೂಮಿಗೆ ಬೇಕಾದ ಮೂಲ ಸೌಕರ್ಯಗಳ ಕುರಿತು ಅವರಿಗೆ ಮನವಿ ಸಲ್ಲಿಸಿದರು. ಅಲ್ಲದೆ ಅದರಲ್ಲಿ ಅಶಕ್ತ ಕಲಾವಿದರಿಗೆ ನೀಡುವ ಮಾಶಾಸನವನ್ನು ಒಂದೂವರೆ ಸಾವಿರದಿಂದ ಐದು ಸಾವಿರಕ್ಕೆ ಏರಿಸಬೇಕು. ಜಿಲ್ಲೆಯಲ್ಲಿ ರಂಗಮಂದಿರದ ಕಲ್ಪನೆಯನ್ನು ಸಾಕಾರಗೊಳಿಸಬೇಕು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಳು ಸಾಹಿತ್ಯ ಅಕಾಡೆಮಿಯಿಂದ ನಾಟಕ ಪ್ರದರ್ಶನಗಳಿಗೆ ಅನುದಾನ ನೀಡಲು ಇರುವ ಕಾನೂನು ತೊಡಕನ್ನು ಹೋಗಲಾಡಿಸಬೇಕು ಸೇರಿದಂತೆ ಹತ್ತು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗಿದೆ.

Advertisement

ವಿವಿಧ ಸೌಲಭ್ಯಗಳಿಗೆ ಮನವಿ
ಪೌರಾಣಿಕ, ಚಾರಿತ್ರಿಕ, ಐತಿಹಾಸಿಕ ನಾಟಕಗಳಿಗೆ ನೇರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನಿಂದ ಹೆಚ್ಚಿನ ಆರ್ಥಿಕ ಅನುದಾನ ಒದಗಿಸಲು, ಮಹಿಳಾ ನಾಟಕೋತ್ಸವ, ಮಕ್ಕಳ ನಾಟಕೋತ್ಸವ, ಕಾಲೇಜು ರಂಗೋತ್ಸವ, ರಂಗ ತರಬೇತಿ ಶಿಬಿರ, ರಂಗ ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆರ್ಥಿಕ ನೆರವು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತುಳು ನಾಟಕ ಪ್ರದರ್ಶಿಸುವ ತಂಡಗಳಿಗೆ ವಿಶೇಷ ಯೋಜನೆಯಡಿಯಲ್ಲಿ ವಿವಿಧ ಸೌಲಭ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂದರ್ಭಗಳಲ್ಲಿ ತುಳು ನಾಟಕರಂಗದ ಅರ್ಹ ಸಾಧಕ ಕಲಾವಿದರನ್ನು ಗುರುತಿಸುವುದು, ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ತುಳು ಮಾತೃ ಭಾಷೆಯ ಕಲಾವಿದರಿಗೂ ಸದಸ್ಯತನ ನೀಡುವುದು, ಅಕಾಡೆಮಿ ಪ್ರಶಸ್ತಿಗೂ ತುಳು ನಾಟಕ ರಂಗದ ಅರ್ಹ ಕಲಾವಿದರನ್ನು ಪರಿಗಣಿಸುವುದು, ರಂಗಭೂಮಿಗೆ ಸಂಬಂಧಿಸಿದಂತೆ ಸಲಕರಣೆಗಳನ್ನು ಖರೀದಿಸಲು ಆರ್ಥಿಕ ನೆರವು, ನಾಡಹಬ್ಬ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತುಳುನಾಡಿನ ವೀರಪುರುಷರ, ಮಹಿಳಾ ಮಣಿಗಳ, ಸ್ವಾಂತಂತ್ರ್ಯ ಹೋರಾಟಗಾರರ ಕುರಿತಾದ ನಾಟಕ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ನಿಯೋಗದಲ್ಲಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಮಾರ್‌ ಮಲ್ಲೂರು, ರಂಗ ಕರ್ಮಿ ವಿ.ಜಿ ಪಾಲ್‌, ಪ್ರದೀಪ್‌ ಆಳ್ವ ಕದ್ರಿ, ಮೋಹನ್‌ ಕೊಪ್ಪಳ ಕದ್ರಿ, ಗೋಕುಲ್‌ ಕದ್ರಿ ಮೊದಲಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next