ಬೆಂಗಳೂರು: ಬಹುಕೋಟಿ ವಂಚನೆಯ ಐಎಂಎ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಕಂಪೆನಿಯ ಹೂಡಿಕೆದಾರರೊಬ್ಬರು ಶುಕ್ರವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಚಿತ್ರದುರ್ಗ ಮೂಲದ ಹೂಡಿಕೆದಾರ ಮೊಹಮ್ಮದ್ ಸಿರಾಜುದ್ದೀನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸುವಂತೆ ಅರ್ಜಿದಾರರ ಪರ ವಕೀಲರು ನ್ಯಾ. ಆಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಮೆಮೋ ಮೂಲಕ ಮನವಿ ಮಾಡಿಕೊಂಡರು. ಅದಕ್ಕೆ ಸೋಮವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಪೀಠ ಹೇಳಿದೆ.
ಐಎಂಎ ಗ್ರೂಪ್ ಆಫ್ ಕಂಪನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನ್ಸೂರ್ ಅಹ್ಮದ್ ಖಾನ್ ವಿರುದ್ಧದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರನ್ನು ಮುಂದಿನ ವಿಚಾರಣೆಗಾಗಿ ಸಿಬಿಐಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಸ್ಥಳೀಯ ಪೊಲೀಸರಿಗೆ ನಿರ್ದೇಶನ ನೀಡಬೇಕು.
ಐಎಂಎ ಕಂಪೆನಿಯ ವಂಚನೆಗೆ ಸಂಬಂಧಿಸಿದಂತೆ 2018ರ ನ.16ರಂದು ಬೆಂಗಳೂರು ಉತ್ತರ ವಲಯದ ಉಪವಿಭಾಗಾಧಿಕಾರಿಗಳು ಅವರೇ ಹೊರಡಿಸಿದ ಸಾರ್ವಜನಿಕ ಪ್ರಕಟಣೆ ಆಧರಿಸಿ ಮನ್ಸೂರ್ ಅಹ್ಮದ್ ಖಾನ್ ವಿರುದ್ಧ ಕೈಗೊಂಡಿರುವ ತನಿಖೆಗೆ ಸಮಗ್ರ ದಾಖಲೆಗಳು ಮತ್ತು ಕಂಪೆನಿಯ ನಿರ್ದೇಶಕರಿಗೆ ಸಂಬಂಧಪಟ್ಟ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಮನ್ಸೂರ್ ಅಹ್ಮದ್ ಖಾನ್ ರಾಜ್ಯದ ಕೆಲವು ಸಚಿವರು, ರಾಜಕಾರಣಿಗಳು, ಐಪಿಎಸ್ ಅಧಿಕಾರಿಗಳಿಗೆ ಆಪ್ತನಾಗಿದ್ದಾನೆ. ಸಚಿವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಆತನ ರಕ್ಷಣೆ ಮಾಡುತ್ತಿದ್ದಾರೆ. ಹಾಗಾಗಿಯೇ ಆತ ಕೋಟ್ಯಂತರ ರೂಪಾಯಿ ದೋಚಿ ದೇಶಬಿಟ್ಟು ಪರಾರಿಯಾಗಿದ್ದಾನೆ. ಸ್ಥಳೀಯ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಈ ತನಿಖೆಯಿಂದ ವಂಚಿತರಿಗೆ ನ್ಯಾಯ ಸಿಗುವುದಿಲ್ಲ. ಆದ್ದರಿಂದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐಗೆ ವಹಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.