ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 (ಎನ್‌ಇಪಿ-2020) ಅನ್ನು ಮುಂದುವರಿಸಬೇಕು ಎಂದು ಪೀಪಲ್ ಫೋರಂ ಫಾರ್ ಕರ್ನಾಟಕ ಎಜುಕೇಷನ್‌ನ ನಿಯೋಗವು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ರಾಜ ಭವನದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೊಳಿಸುವ ಚಿಂತನೆಯನ್ನು ರಾಜ್ಯ ಸರಕಾರ ಕೈ ಬಿಟ್ಟು ಈಗಾಗಲೇ ಜಾರಿಯಾಗಿರುವ ಎನ್‌ಇಪಿಯನ್ನು ಮುಂದುವರಿಸುವಂತೆ ಸರಕಾರಕ್ಕೆ ಸೂಚಿಸಬೇಕು ಎಂದು ಕೋರಿದ ನಿಯೋಗ, ಎನ್‌ಇಪಿ ಮುಂದುವರಿಸುವಂತೆ ರಾಜ್ಯವ್ಯಾಪಿ ನಡೆಸಿರುವ ಸಹಿ ಸಂಗ್ರಹ ಅಭಿಯಾನದ ವರದಿಯನ್ನು ರಾಜ್ಯಪಾಲರಿಗೆ ಸಲ್ಲಿಸಿತು. ರಾಜ್ಯಪಾಲರು ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಸಚಿವ ಜತೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ನಿಯೋಗದ ಸದಸ್ಯರು ಹೇಳಿದ್ದಾರೆ.
ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿವೃತ್ತ ಕುಲಪತಿ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ್, ನಾವು ರಾಷ್ಟ್ರೀಯ ಶಿಕ್ಷಣಕ್ಕೆ ಬಾಗಿಲು ಮುಚ್ಚಿದರೆ, ನಮ್ಮ ಮಕ್ಕಳು ಶೈಕ್ಷಣಿಕವಾಗಿ ಸಂಕಷ್ಟದ ಸ್ಥಿತಿಗೆ ತಳ್ಳಲ್ಪಡುತ್ತಾರೆ. ಎನ್‌ಇಪಿ ನಮ್ಮ ಶಿಕ್ಷಣದ ಮುಂದಿನ ಹೆಜ್ಜೆಯನ್ನು ನಿರ್ಧರಿಸುತ್ತದೆ. ಎಸ್‌ಇಪಿ ನಮ್ಮನ್ನು ಹಿಂದೆಳೆಯುತ್ತದೆ ಎಂದು ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ ಮಾತನಾಡಿ, ಈ ಹಿಂದೆ ಎಲ್ಲ ಶಿಕ್ಷಣಕ್ಕೆ ಸಂಬಂಧಿಸಿ ರಾಷ್ಟ್ರೀಯ ನೀತಿಗಳು ಮತ್ತು ಆಯೋಗಗಳ ವರದಿ ರಾಜ್ಯದಲ್ಲಿ ಜಾರಿಯಾಗಿದೆ. ಎನ್‌ಇಪಿ ಬಗ್ಗೆ ಕಾಂಗ್ರೆಸ್ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು ದೇಶದ ಶಿಕ್ಷಣ ವ್ಯವಸ್ಥೆಯಿಂದ ಪ್ರತ್ಯೇಕಗೊಳಿಸಲು ಮುಂದಾಗಿದೆ ಎಂದು ದೂರಿದರು.
ನಿಯೋಗದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್, ವಿಧಾನ ಪರಿಷತ್‌ನ ಮಾಜಿ ಸದಸ್ಯ ಅರುಣ್ ಶಹಾಪುರ, ಶಿಕ್ಷಣ ತಜ್ಞರಾದ ಪ್ರೊ| ನಂದಿನಿ ಲಕ್ಷ್ಮೀಕಾಂತ್, ಪ್ರೊ| ವೀರೇಶ್ ಬಾಳಿಕಾಯಿ, ಪ್ರೊ| ಸಂದೀಪ್ ಬೂದಿಹಾಲ್, ಡಾ| ಟಿ.ಎಂ.ಗಿರೀಶ್ ಮುಂತಾದವರಿದ್ದರು.