ಬೆಳಗಾವಿ: ನೇಜಾರಿನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣದ ತ್ವರಿತ ವಿಚಾರಣೆ ನಡೆಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ಮುಸ್ಲಿಮ್ ಜಸ್ಟೀಸ್ ಫೋರಂ ನೇತೃತ್ವದ ನಿಯೋಗ ಮಂಗಳವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಸರಕಾರಿ ಅಭಿಯೋಜಕರನ್ನು ಕೂಡಲೇ ನೇಮಿಸಬೇಕು. ತ್ವರಿತಗತಿಯಲ್ಲಿ ವಿಚಾರಣೆ ಪೂರ್ಣಗೊಳಿಸಿ ಆರೋಪಿಗೆ ಶಿಕ್ಷೆ ಖಾತ್ರಿ ಪಡಿಸಲು ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು. ಕೃತ್ಯದಲ್ಲಿ ಭಾಗಿಯಾದ ಅಥವಾ ಸಹಕರಿಸಿರಬಹುದಾದ ಇತರರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಆಯಕಟ್ಟಿನ ಜಾಗದಲ್ಲಿ ಸಿಸಿ ಟಿವಿ ಅಳವಡಿಸಬೇಕು ಎಂದು ನಿಯೋಗ ಒತ್ತಾಯಿಸಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಕ್ರಮದ ಭರವಸೆ ನೀಡಿದರು.
ನೂರ್ ಮೊಹಮ್ಮದ್ ಅವರ ಪುತ್ರ ಬಿಬಿಎಂ ಪಧವೀಧರ ಆಸಾದ್‌ಗೆ ಸರಕಾರಿ ಉದ್ಯೋಗವನ್ನು ನೀಡಬೇಕು ಎಂದು ಆಗ್ರಹಿಸಿ ಗೃಹ ಸಚಿವ ಡಾ| ಪರಮೇಶ್ವರ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಪೌರಾಡಳಿತ ಸಚಿವ ರಹೀಂ ಖಾನ್, ಜಮೀರ್ ಅಹಮದ್ ಅವರಿಗೂ ಮನವಿ ನೀಡಲಾಯಿತು.
ಸ್ಪೀಕರ್ ಯು.ಟಿ. ಖಾದರ್, ಸಂತ್ರಸ್ತ ಕುಟುಂಬದ ಯಜಮಾನ ನೂರ್ ಮುಹಮ್ಮದ್, ಸಂಬಂಧಿ ಅಶ್ರಫ್ ಕೆ., ವಿವಿಧ ಸಂಘಟನೆಗಳ ಪ್ರಮುಖರಾದ ಮುಹಮ್ಮದ್ ಇರ್ಷಾದ್, ಇಸ್ಮಾಯಿಲ್ ಹುಸೈನ್ ಕಟಪಾಡಿ, ಶಾಹುಲ್ ಹಮೀದ್, ಶಂಸುದ್ದೀನ್ ಸುಳ್ಯ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜಾ, ಮುಖಂಡರಾದ ಜಿ.ಎ. ಬಾವಾ, ಎಂ.ಎ. ಗಫೂರ್ ಉಪಸ್ಥಿತರಿದ್ದರು.