ದೇವನಹಳ್ಳಿ: ಗುತ್ತಿಗೆದಾರ ಸಂತೋಷ್ ಕುಮಾರ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಪ್ರಸನ್ನಕುಮಾರ್ ಆಗ್ರಹಿಸಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಡಿದ ಕೆಲಸಕ್ಕೆ ಕಾರ್ಯಾ ದೇಶ ನೀಡಲು ಹಾಗೂ ಬಿಲ್ ಪಾವತಿಸಲು ಸಚಿವ ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಶೇ. 40ರಷ್ಟು ಕಮಿಷನ್ ಕೇಳಿದ್ದಾರೆ. ಮಾತಿಗೆ ಮುಂಚೆ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರವನ್ನು ತೊಡೆದು ಹಾಕುತ್ತೇವೆ ಎಂದು ಹೇಳಿದವರು. ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರ ಶೇ.40ರಷ್ಟು ಕಮಿಷನ್ ಸರ್ಕಾರವಾಗಿದ್ದು ಏಕೆ ಮಾತನಾಡುತ್ತಿಲ್ಲ. ರಾಜ್ಯದ ಬಿಜೆಪಿ ಸರ್ಕಾರ ನೈತಿಕತೆಯಿದ್ದರೆ ಸಚಿವ ಈಶ್ವರಪ್ಪ ಅವರನ್ನು ಕೂಡಲೇ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಬೆಲೆ ಏರಿಕೆ ನಿಯಂತ್ರಿಸಿ:ಮುಂದಿನ ಚುನಾವಣೆಗೆ ಪ್ರಚಾರ ಇಲ್ಲದಿರುವುದರಿಂದ ಹಿಜಾಬ್, ಹಲಾಲ್ ಕಟ್ ಸೇರಿದಂತೆ ವಿಚಾರಗಳ ಬಗ್ಗೆ ಗೊಂದಲ ಸೃಷ್ಟಿ ಮಾಡಿ ಧರ್ಮಗಳ ನಡುವೆ ವಿಷಬೀಜ ಬಿತ್ತಿ ಸಮಾಜ ಛಿದ್ರಗೊಳಿಸುವ ಕೆಲಸ ಮಾಡಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮದ್ಯಮ ಮತ್ತು ಕೆಳವರ್ಗದವರ ಜನಜೀವನ ತುಂಬಾ ಕಷ್ಟಕರವಾಗಿರುತ್ತದೆ. ಇಂಧನ ಮತ್ತು ಅಗತ್ಯವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಮಾಡದಿದ್ದರೆ ಜನಸಾಮಾನ್ಯರ ಬದುಕು ಬರಡಾಗುತ್ತದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಸಂಘಟನೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ಮಾತ ನಾಡಿ, ದೇವನಹಳ್ಳಿಯಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಈ ಬಾರಿ ಗೆಲ್ಲಲಿದ್ದಾರೆ ಎಂಬ ಕಾರಣಕ್ಕಾಗಿ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ. ಸಿಹಿ ಇದ್ದ ಜಾಗದಲ್ಲಿ ಆಕಾಂಕ್ಷಿಗಳು ಹೆಚ್ಚಾಗುವುದು ಸರ್ವೇ ಸಾಮಾನ್ಯವಾಗಿದೆ. ಈಗಾಗಲೇ ದೇವನಹಳ್ಳಿ ವಿಧಾನಸಭಾಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುತ್ತಿದ್ದೇವೆ. 2023ರಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೂಗೆದು ಕಾಂಗ್ರೆಸ್ ಸರ್ಕಾರ ಬರುವುದು ಖಚಿತ ಎಂದರು.
ಕಾಂಗ್ರೆಸ್ ಕಸಬಾ ಹೋಬಳಿ ಅಧ್ಯಕ್ಷ ಗೋಪಾಲಕೃಷ್ಣ, ಬಿದಲೂರು ಗ್ರಾಪಂ ಮಾಜಿ ಅಧ್ಯಕ್ಷ ಮುನಿರಾಜು, ಖಾದಿ ಬೋರ್ಡ್ ನಿರ್ದೇಶಕ ಎಂ.ಶ್ರೀನಿವಾಸ್, ಮುಖಂಡ ರಾಜಣ್ಣ, ಸುರೇಶ್ ಹಾಗೂ ಮತ್ತಿತರರು ಇದ್ದರು.