ವಿಜಯಪುರ: ರಾಜ್ಯದಲ್ಲಿ ಜಾರಿಗೆ ತರಲು ಮುಂದಾಗಿರುವ ಗೋಹತ್ಯೆ ಕಾಯ್ದೆ ಹಿಂಪಡೆಯ ಬೇಕು ಎಂದು ಆಗ್ರಹಿಸಿ ಬಹುಜನ ಸಮಾಜ ಪಕ್ಷದಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಆರ್. ತೊರವಿ ಮಾತನಾಡಿ, ಅನೇಕ ಜ್ವಲಂತ ಸಮಸ್ಯೆಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಬೇಕು. ಆದರೆ ರಾಜ್ಯ ಬಿಜೆಪಿ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸುವ ಬದಲು ಜನರಿಗೆ ಅಗತ್ಯವಿಲ್ಲದ ವಿಷಯಗಳಿಗೆ ಆದ್ಯತೆ ನೀಡುತ್ತಿದೆ ಎಂದು ದೂರಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಮನೆ, ಬೆಳೆ, ಆಸ್ತಿ ಕಳೆದುಕೊಂಡವರಿಗೆ ಇನ್ನೂ ಪುನರ್ವಸತಿ ಕಲ್ಪಿಸಿಲ್ಲ. ಬಗರ್ ಹುಕುಂ ಸಾಗುವಳಿ ಸಕ್ರಮವಾಗಿಲ್ಲ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ತಡೆಯಲಾಗಿದೆ. ಕೇಂದ್ರ ಸರ್ಕಾರ ನಿತ್ಯ ಪೆಟ್ರೋಲ್, ಡೀಸೆಲ್ ಸೇರಿ ಇಂಧನಗಳ ಬೆಲೆ ನಿರಂತರ ಏರಿಸುತ್ತಲೇ ಇದೆ. ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜೀವನ ನಿರ್ವಹಣೆ ಕಷ್ಟವಾಗಿದೆ. ಇಷ್ಟಿದ್ದರೂ ಸರ್ಕಾರ ಇಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 13 ವರ್ಷದೊಳಗಿನ ಹಸುಗಳನ್ನು ಕೊಂದರೆ 7 ವರ್ಷ ಜೈಲು ಮತ್ತು ಜುಲ್ಮಾನೆ ವಿಧಿ ಸುವ ಗೋಹತ್ಯೆ ಕಾಯ್ದೆ ಜಾರಿಗೆ ಮುಂದಾಗಿರುವುದು ಸರಿಯಲ್ಲ ಎಂದರು.
ರಾಮಾಯಣದಲ್ಲಿ ರಾಮ- ಲಕ್ಷ್ಮಣನಿಗೆ ಹಸುವಿನ ಮಾಂಸದ ಊಟಕ್ಕೆ ಆಹ್ವಾನಿಸಿದ ಕುರಿತು ಪ್ರಸ್ತಾಪವಿದೆ. ಯಜ್ಞ-ಯಾಗಾದಿಗಳಲ್ಲಿ ಗೋಮಾಂಸ ಬಳಕೆ ಉದಾಹರಣೆಗಳಿವೆ. ಹೀಗಿದ್ದೂ ಆಧಾರ ರಹಿತವಾಗಿ ಹಸುವಿನ ಮಾಂಸ ಸೇವನೆ ಅಪರಾಧ ಎಂದು ಕಾಯ್ದೆ ಜಾರಿಗೆ ತಂದಿರುವ ಕ್ರಮ ಹಿಂದೂ ಸಮುದಾಯದವರನ್ನು ಧರ್ಮದ ಹೆಸರಿನಲ್ಲಿ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಇಂಥ ಕಾಯ್ದೆಗಳ ಮೂಲಕ ಸಮಾಜ ವಿಭಜನೆ ಮಾಡಿ ಬಿಜೆಪಿ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳುವ ಹುನ್ನಾರ ಅಡಗಿದೆ ಎಂದು ದೂರಿದರು.
ಇದನ್ನೂ ಓದಿ:9 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ: ತಿಪ್ಪಾರೆಡ್ಡಿ
ಗೋವು ಸೇರಿದಂತೆ ದನಗಳ ಮಾಂಸ ರಫ್ತು ಮಾಡುವಲ್ಲಿ ಭಾರತಕ್ಕೆ ವಿಶ್ವದಲ್ಲೇ ಎರಡನೇ ಸ್ಥಾನವಿದೆ. ದನಗಳ ಮಾಂಸ ರಫ್ತು ಮಾಡಿಯೇ ಭಾರತ 2019ರಲ್ಲಿ 3.1 ಬಿಲಿಯನ್ ಡಾಲರ್ ಅಂದಾಜು ಆದಾಯ ಗಳಿಸಿದೆ. ಇದು ಪಾಕಿಸ್ತಾನ, ಚೈನಾ ದೇಶ ಮೀರಿಸಿದೆ. ಉತ್ತರ ಭಾರತದ ಪ್ರಮುಖ ರಾಜಕೀಯ ನಾಯಕರು, ಜನಪ್ರತಿನಿಧಿ ಗಳ ಒಡೆತನದಲ್ಲಿರುವ ಕಂಪನಿಗಳು ವಿದೇಶಗಳಲ್ಲಿ ದನದ ಮಾಂಸ ರಫ್ತು ಮಾಡುವಲ್ಲಿ ಹೆಸರು ಗಳಿಸಿವೆ ಎಂದು ಹರಿಹಾಯ್ದರು.
ಮತ್ತೂಂದೆಡೆ ಪೊಲೀಸ್ ಕಾವಲು ಮೀರಿ ಗೋ ರಕ್ಷಕರ ಹೆಸರಿನಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಗೋಹತ್ಯೆ ಕಾಯ್ದೆ ಜನರ ಆಹಾರ ಹಕ್ಕನ್ನು ಕಿತ್ತುಕೊಳ್ಳುತ್ತಿದೆ. ಹೀಗಾಗಿ ಬಹುಜನ ಸಮಾಜ ಪಾರ್ಟಿ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸುತ್ತಿದೆ ಎಂದರು.ಈ ವೇಳೆ ಬಿಎಸ್ಪಿ ಜಿಲ್ಲಾಧ್ಯಕ್ಷ ಅಕ್ಬರ ಮುಲ್ಲಾ, ಯಶವಂತ ಪೂಜಾರಿ, ದಸ್ತಗೀರ ಮುಲ್ಲಾ, ರಮೇಶ ಐಹೊಳಿ, ಬಸವರಾಜ ಕಾಂಬಳೆ, ಮಿಲಿಂದ ತೊರವಿ, ದೇವರಾಜ ಬನಸೋಡೆ ಇತರರಿದ್ದರು.