ರಾಯಚೂರು: ಮತಾಂತರ ನಿಷೇಧ ಕಾಯ್ದೆಯಿಂದ ಜಾತಿವಾದ, ಮತಾಂಧ ಘಟನೆಗಳು ಹೆಚ್ಚಲಿದ್ದು, ಕೂಡಲೇ ಕಾಯ್ದೆ ಹಿಂಪಡೆಯಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಪದಾಧಿಕಾರಿಗಳು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಸೋಮವಾರ ಮನವಿ ಸಲ್ಲಿಸಿದರು. ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಂಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣ ವಿಧೇಯಕ ದುರುದ್ದೇಶದಿಂದ ಕೂಡಿದೆ. ಆಳುವ ವರ್ಗಗಳು ತಾವು ಬಯಸಿದಾಗಲೆಲ್ಲ ರಾಜ್ಯದಲ್ಲಿ ಅಶಾಂತಿ ಉಂಟು ಮಾಡಲು ಮತ್ತು ಅನಿಷ್ಠ ಜಾತಿ ವ್ಯವಸ್ಥೆ ಮುನ್ನಡೆಸಲು ನೆರವಾಗುವ ದುರುದ್ದೇಶದಿಂದ ಇಂಥ ವಿಧೇಯಕಗಳನ್ನು ಮಂಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಕೋಮು ಹಾಗೂ ಜಾತಿ ದ್ವೇಷಗಳನ್ನು ಮುಂದುವರಿಸುವ ಮತ್ತು ದುಡಿಯುವ ಜನರನ್ನು ವಿಭಜಿಸಿ ಆಳಲು ಮತಾಂಧ ಹಾಗೂ ಜಾತಿವಾದಿ ಪುಂಡಾಟಿಕೆಗೆ ನೆರವಾಗುವ ದುರುದ್ದೇಶದಿಂದ ರೂಪಿಸಲಾದ ಸಂವಿಧಾನ ವಿರೋಧಿ ವಿಧೇಯಕವನ್ನು ಸರ್ಕಾರ ಮಂಡಿಸಿರುವುದು ಖಂಡನೀಯ. ಈ ಹಿಂದೆ ಬಲವಂತದ ಮತಾಂತರ ತಡೆಯುವ ಉದ್ದೇಶದಿಂದ ಮತಾಂತರ ನಿಷೇಧ ಕಾಯ್ದೆ ತರಲಾಗುವುದೆಂದು ಪ್ರಚಾರಗೊಳಿಸಲಾಯಿತು. ಆದರೆ, ಅದರ ನಿರ್ಧಿಷ್ಟ ಜಾತಿ ಮತ್ತು ಧರ್ಮಗಳನ್ನು ಗುರಿಯಾಗಿಸಿಕೊಂಡು ಈ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಹೊರಟಿದೆ. ಪ್ರಜಾಸತ್ತೆಯ ವಿರೋಧಿ ವಿಧೇಯಕವಾಗಿರುವ ಮತಾಂತರ ನಿಷೇಧ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಸಿಪಿಐ (ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ, ತಾಲೂಕು ಕಾರ್ಯದರ್ಶಿ ಶರಣಬಸವ, ಸದಸ್ಯರಾದ ಕರಿಯಪ್ಪ ಅಚ್ಚೊಳ್ಳಿ, ರಂಗನಗೌಡ, ಗೋವಿಂದ, ಶಿವು ಇದ್ದರು.