ಹೂವಿನಹಡಗಲಿ: ತಾಲೂಕಿನ ಮೈಲರ ಶುಗರ್ಸ್ ಕಾರ್ಖಾನೆ ಕಲುಷಿತ ನೀರನ್ನು ರೈತರ ಹೊಲಗಳಿಗೆ ಹರಿಬಿಟ್ಟಿರುವುದರಿಂದಾಗಿ ರೈತರ ಹೊಲಗಳಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ರೈತರು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಮೈಲಾರ ಶುಗರ್ಸ್‌ನವರು ಬೇಕಾಬಿಟ್ಟಿಯಾಗಿ ರೈತರ ಹೊಲಗಳಲ್ಲಿ ಹರಿಬಿಡುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು ಎಂದು ಬೀರಬ್ಬಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರೈತರ ಹೊಲಗಳಿಗೆ ಕಾರ್ಖಾನೆಯ ಕಲುಷಿತ ನೀರು ಹರಿಬಿಡುವುದರಿಂದಾಗಿ ಭೂಮಿ ಫಲವತ್ತತೆ ಕಡಿಮೆಯಾಗುತ್ತಿದೆ. ರೈತರು ಹೊಲದಲ್ಲಿ ಕೆಲಸ ಮಾಡುವುದು ಸಹ ತೊಂದರೆಯಾಗುತ್ತಿದೆ. ಕೆಟ್ಟ ವಾಸನೆಯಿಂದಾಗಿ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಾರ್ಖಾನೆಯವರು ಒಂದು ನಿರ್ದಿಷ್ಟ ಪ್ರದೇಶದಿಂದ ಕಲುಷಿತ ನೀರು ಹರಿಬಿಡುವ ಬದಲು ನಿರ್ಲಕ್ಷತನದಿಂದ ಎಲ್ಲೆಂದರಲ್ಲಿ ರೈತರ ಹೊಲಗಳಿಗೆ ಹರಿಬಿಡುತ್ತಿದ್ದಾರೆ. ಇದರಿಂದಾಗಿ ಬೆಳೆ ನಷ್ಟವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇನ್ನೂ ಹೀಗೆ ಮುಂದುವರಿದರೆ ಅರಳಿಹಳ್ಳಿ ಕೆರೆಗೂ ಕಲುಷಿತ ನೀರು ಹೋಗಿ ಸೇರುತ್ತದೆ. ಇಲ್ಲಿನ ನೀರನ್ನು ದನಕರುಗಳು ಕುಡಿಯುವುದರಿಂದಾಗಿ ದನಕರುಗಳಿಗೆ ತೊಂದರೆ ಆಗಬಹುದು. ಕಾರಣ ಮುಂದೆ ಆಗಬಹುದಾದ ಆನಾಹುತವನ್ನು ತಪ್ಪಿಸಲು ಈ ಕೂಡಲೇ ಕಾರ್ಖಾನೆಯವರು ಎಚ್ಚೆತ್ತುಕೊಂಡು ಕಲುಷಿತ ನೀರನ್ನು ಒಂದು ಸುರಕ್ಷಿತ ಪ್ರದೇಶದಿಂದ ಕೊನೆಗಾಣಿಸಬೇಕಾಗಿದೆ. ಈ ಕೂಡಲೇ ತಾಲೂಕು ಅಡಳಿತ ಕಂಪನಿಗೆ ಸೂಕ್ತ ಮಾರ್ಗದರ್ಶನ ನೀಡಿ ರೈತರಿಗೆ ಆಗಬಹುದಾದ ತೊಂದರೆಯನ್ನು ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಮಲ್ಲಿಕಾರ್ಜುನ, ಎಚ್. ಎಂ.ಚಿದಾನಂದಯ್ಯ, ಎಂ. ಮಹ್ಮದ್ ಗೌಸ್, ಎ.ದಾದಾಪೀರು ಮನವಿ ಸಂದರ್ಭದಲ್ಲಿದ್ದರು.