ಹೂವಿನಹಿಪ್ಪರಗಿ: ಸರಕಾರಗಳು ಜನರ ಆರೋಗ್ಯದ ಹಿತದೃಷ್ಟಿಯಿಂದ ಅಲ್ಲಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿವೆಯಾದರೂ ಅವು ವಿವಿಧ ಕಾರಣಗಳಿಂದ ಬಂದ್ ಆಗಿವೆ.
ಹೂವಿನಹಿಪ್ಪರಗಿ ಹೋಬಳಿಯ ವಡವಡಗಿ ಗ್ರಾಪಂನ ಹುಲಿಬೆಂಚಿ, ದಿಂಡವಾರ ಪಂಚಾಯಿತಿ ವ್ಯಾಪ್ತಿಯ ಕಾಮನಕೇರಿ, ದಿಂಡವಾರ, ಕುದರಿ ಸಾಲವಾಡಗಿ ಪಂಚಾಯಿತಿ ವ್ಯಾಪ್ತಿಯ ಕುದರಿ ಸಾಲವಾಡಗಿ, ರಾಮನಹಟ್ಟಿ, ಹೂವಿನಹಿಪ್ಪರಗಿ ಗ್ರಾಪಂ ವ್ಯಾಪ್ತಿಯ ಅಗಸಬಾಳ, ಬ್ಯಾಕೋಡ ಪಂಚಾಯಿತಿಯಲ್ಲಿನ ಜಾಯವಾಡಗಿ, ಹುಣಿಶ್ಯಾಳ ಪಿ.ಬಿ. ಗ್ರಾಪಂ ವ್ಯಾಪ್ತಿಯ ಸಂಕನಾಳ ಹಾಗೂ ತಾಂಡಾ, ಕಣಕಾಲ, ಕಾನ್ನಾಳ ಗ್ರಾಮ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪಿಸಲಾಗಿದೆಯಾದರೂ ಅವು ತಾಂತ್ರಿಕ ಕಾರಣಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ.
ವಿವಿಧ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಹಲವಾರು ಬಾರಿ ಸಂಬಂಧಿಸಿದವರನ್ನು ಸಂಪರ್ಕಿಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲವಾಗಿದೆ. ಇವುಗಳನ್ನು ಶೀಘ್ರ ದುರಸ್ತಿಗೊಳಿಸಿ ಜನರಿಗೆ ಶುದ್ಧ ಕುಡಿವ ನೀರು ಒದಗಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.
ಕೆಲವು ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕಾರಣಾಂತರಗಳಿಂದ ಸ್ಥಳಾಂತರ ಮಾಡುವ ಅನಿವಾರ್ಯತೆಯಿದೆ. ಕೆಲವು ಘಟಕಗಳು ಗುಜರಿಗೆ ಹೋಗುವ ಸ್ಥಿತಿಯಲ್ಲಿವೆ. ಅವುಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. –
ಎಸ್.ಎಚ್. ಮುದ್ದೇಬಿಹಾಳ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇ
ಬ್ಯಾಕೋಡ ಗ್ರಾಪಂ ವ್ಯಾಪ್ತಿಯಲ್ಲಿನ ಜಾಯವಾಡಗಿ ಗ್ರಾಮದ ನೀರಿನ ಘಟಕ ಕೆಲ ದಿನಗಳಿಂದ ದುರಸ್ತಿಗೆ ಬಂದಿದ್ದು, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆದಷ್ಟು ಬೇಗ ದುರಸ್ತಿ ಮಾಡಿಸಿ ಜನರಿಗೆ ಅನುಕೂಲ ಮಾಡುತ್ತೇನೆ.
–ಐ.ಎ.ಮಮದಾಪುರ, ಪಿಡಿಒ ಬ್ಯಾಕೋಡ ಗ್ರಾಮ ಪಂಚಾಯಿತಿ
ಲಕ್ಷಗಟ್ಟಲೆ ಖರ್ಚು ಮಾಡಿ ಮಾಡಿದ ಘಟಕಗಳು ಗುಜರಿಗೆ ಹೋಗುವ ಸ್ಥಿತಿಯಲ್ಲಿವೆ. ಅವುಗಳನ್ನು ನೋಡುವವರೇ ಇಲ್ಲ. ಅಧಿಕಾರಿಗಳು ಕಾಟಾಚಾರಕ್ಕೆಂಬಂತೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ವರದಿ ಮಾಡಿ ಕೊಡುತ್ತಾರೆ. ಸಾರ್ವಜನಿಕರ ಮಾತಿಗೆ ಕಿಮ್ಮತ್ತಿಲ್ಲ ಎಂಬಂತಾಗಿದೆ. –
ವೀರೇಶ ಬಳ್ಳಾವೂರ, ಸ್ಥಳೀಯ
–ದಯಾನಂದ ಬಾಗೇವಾಡಿ