Advertisement

ಜಿಎಸ್‌ಟಿ ಪರಿಹಾರ ಅವಧಿ ವಿಸ್ತರಣೆಗೆ ಮನವಿ

11:27 PM Jun 15, 2019 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರವನ್ನು 2022ರ ನಂತರವೂ ವಿಸ್ತರಣೆ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Advertisement

ಕೇಂದ್ರ ಸರ್ಕಾರವು ಜಿಎಸ್‌ಟಿ ಜಾರಿ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳಿಗೆ ಆಗುವ ನಷ್ಟ ಸರಿದೂಗಿಸಲು 2022ರವರೆಗೆ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿತ್ತು. ಆದರೆ, ನಂತರ ನಮ್ಮ ರಾಜ್ಯಕ್ಕೆ ಹೆಚ್ಚುವರಿಯಾಗಿ ಸಂಪನ್ಮೂಲ ಕ್ರೋಢೀಕರಿಸಲು ಹೆಚ್ಚು ಅವಕಾಶಗಳಿಲ್ಲ. ಹೀಗಾಗಿ, ಕೇಂದ್ರ ಸರ್ಕಾರ ಪರಿಹಾರ ಅವಧಿ ವಿಸ್ತರಣೆ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು.

ಜೆಎಸ್‌ಟಿ ಪರಿಹಾರದ ಅವಧಿ 2022ಕ್ಕೆ ಅಂತ್ಯಗೊಂಡರೆ ಈಗಾಗಲೇ ರೂಪಿಸಲಾಗಿರುವ ಹಾಗೂ ಅನುಷ್ಟಾನದ ಹಂತದಲ್ಲಿರುವ ಅಭಿವೃದ್ಧಿ ಹಾಗೂ ಇತರ ಮೂಲಸೌಕರ್ಯ ಯೋಜನೆಗಳಿಗೆ ಆರ್ಥಿಕ ಸಂಕಷ್ಟ ಎದುರಾಗಬಹುದು. ಹೀಗಾಗಿ, ಪರಿಹಾರ ಅವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಮುಂದಿನ ದಶಕವನ್ನು ನೀರಿನ ದಶಕವೆಂದು ಘೋಷಿಸಿ: ರಾಜ್ಯದಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಹಾಗೂ ಸರ್ಕಾರದ ವತಿಯಿಂದ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಸಭೆಯಲ್ಲಿ ಮುಖ್ಯಮಂತ್ರಿಯವರು ವಿವರಣೆ ನೀಡಿದರು.

“ಕಳೆದ ಆಗಸ್ಟ್‌ ಅವಧಿಯ ಸಭೆಯಲ್ಲೇ ನಾನು ನೀರಿನ ತೊಂದರೆ ಬಗ್ಗೆ ವಿವರಿಸಿದ್ದೆ. ನೀರಿನ ಕೊರತೆ ಗಂಭೀರವಾಗಲಿದೆ ಎಂದು ಒತ್ತಿ ಹೇಳಿದ್ದೆ. ಆದ್ದರಿಂದ ನೀರಿನ ಸಂರಕ್ಷಣೆಯ ಪ್ರಯತ್ನಕ್ಕೆ ಮುಂದಿನ ದಶಕವನ್ನು ನೀರಿನ ದಶಕ ಎಂದು ಘೋಷಿಸಬೇಕು’ ಎಂದು ಸಲಹೆ ನೀಡಿದರು.

Advertisement

ಕರ್ನಾಟಕವು ರಾಜಸ್ಥಾನದ ನಂತರ ದೇಶದ ಎರಡನೇ ಶುಷ್ಕ ವಾತಾವರಣದ ರಾಜ್ಯವಾಗಿದ್ದು, ಕಳೆದ 15 ವರ್ಷಗಳಲ್ಲಿ 12 ವರ್ಷ ಬರಗಾಲ ಕಂಡಿದೆ. ಆದ್ದರಿಂದ ಬರಗಾಲ ನಿವಾರಣೆಗೆ ದೀರ್ಘ‌ಕಾಲೀನ ಯೋಜನೆ ರೂಪಿಸಿ, ಹೆಚ್ಚಿನ ಆದ್ಯತೆ ನೀಡಲಾಗಿದೆ. 2019-20ನೇ ವರ್ಷವನ್ನು ಕರ್ನಾಟಕದಲ್ಲಿ “ನೀರಿನ ವರ್ಷ’ ಎಂದು ಘೋಷಿಸಲಾಗಿದೆ.

ನೀರಿನ ಸಾಕ್ಷರತೆಯನ್ನು ಉಂಟು ಮಾಡಲು ಹಾಗೂ ನೀರಿನ ಪುನರ್‌ ಬಳಕೆ ಉತ್ತೇಜಿಸಲು ಹೊಸ ಜಲಮೂಲ ಸೃಷ್ಟಿಸಲು “ಜಲಾಮೃತ’ ಎಂಬ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಹಸಿರೀಕರಣ ಪ್ರಚಾರ ಮಾಡಲು ಎರಡು ಕೋಟಿ ಗಿಡ ನೆಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ರಾಜ್ಯವು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಬೆಂಗಳೂರು ಸುತ್ತಮುತ್ತಲ ನಗರಗಳ ಕೆರೆಗಳಿಗೆ ತುಂಬಿಸಲು 2,574 ಕೋಟಿ ರೂ.ಯೋಜನೆ ರೂಪಿಸಿ, ಅನುಷ್ಟಾನಗೊಳಿಸಲಾಗುತ್ತಿದೆ.

ಇದರಿಂದ ಅಂತರ್ಜಲ ಹೆಚ್ಚಿಸಲು ಸಹಾಯವಾಗುತ್ತದೆ. “ಜಲಧಾರೆ’ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸರ್ಕಾರ ಯೋಜನೆ ರೂಪಿಸಿದೆ. ಇದಕ್ಕಾಗಿ ಐದು ವರ್ಷಗಳ ಅವಧಿಗೆ 50 ಸಾವಿರ ಕೋಟಿ ರೂ. ಅವಶ್ಯಕವಿದೆ. ಈಗಾಗಲೇ ಗ್ರಾಮೀಣ ಭಾಗಗಳಲ್ಲಿ ಶುದ್ಧ ನೀರು ಪೂರೈಸಲು 18 ಸಾವಿರ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ರಾಜ್ಯಕ್ಕೆ ನೆರವು ಹೆಚ್ಚಿಸಿ: ಗ್ರಾಮೀಣ ನೀರು ಪೂರೈಕೆ ಯೋಜನೆಯಲ್ಲಿ ಕೇಂದ್ರ ಸರ್ಕಾರವು ನೀಡುವ ನೆರವಿನ ಪ್ರಮಾಣ ಕಡಿಮೆಯಾಗಿದೆ. ಈ ವರ್ಷ ರಾಜ್ಯವು ಗ್ರಾಮೀಣ ಕುಡಿಯುವ ನೀರಿಗಾಗಿ 2,800 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಿದೆ. ಆದರೆ, ಕೇಂದ್ರ ಸರ್ಕಾರ ಕೇವಲ 400 ಕೋಟಿ ರೂ.ನೀಡಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವು ತನ್ನ ನೆರವಿನ ಪಾಲನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next