Advertisement

Vijayapura ಜನತಾ ದರ್ಶನದಲ್ಲಿ ದಯಾಮರಣಕ್ಕೆ ಮನವಿ…!

05:20 PM Nov 02, 2023 | keerthan |

ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಧ್ಯಕ್ಷತೆಯಲ್ಲಿ ಗುರುವಾರ ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ದಯಾಮರಣಕ್ಕೆ ಅರ್ಜಿ ಸಲ್ಲಿಸಿದರೆ, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೆತ್ತವರು ತಮ್ಮ ಮಕ್ಕಳ ಹತ್ಯೆ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡ ಘಟನೆಗಳು ಜರುಗಿದವು.

Advertisement

ವಿವಿಧ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡಿರುವ ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದು, ತನ್ನ ಜಮೀನಿನ ದಾಖಲೆ ಹಾಗೂ ಗುರುತಿನ ಪತ್ರಗಳನ್ನು ನೀಡಿ ಜಾಮೀನು ಪಡೆದಿದ್ದಾರೆ. ಈ ವಿಷಯದಲ್ಲಿ ಅವರು ಮಾಡಿದ ತಪ್ಪಿಗೆ ನ್ಯಾಯಾಲಯದಲ್ಲಿ ನಾನು ದಂಡ ತೆತ್ತಿದ್ದೇನೆ ಎಂದು ವಿಜಯಪುರ ನಿವಾಸಿಯಾಗಿರುವ ಹಡಗಲಿ ಗ್ರಾಮದ ಇಮಾಮಸಾಬ್ ಭಾವಿಕಟ್ಟಿ ಅಳಲು ತೋಡಿಕೊಂಡರು.

ನನ್ನ ಹೆಸರಿನಲ್ಲಿ ನ್ಯಾಯಾಲಯಕ್ಕೆ ನಕಲಿ ದಾಖಲೆ ಸೃಷ್ಟಿಸಿ ಜಾಮೀನು ಪಡೆದಿರುವ ಕುರಿತು ಪೊಲೀಸರಿಗೆ ದೂರು ನೀಡಿ 4 ವರ್ಷ ಗತಿಸಿದರೂ ಪ್ರಕರಣದ ತನಿಖೆ ನಡೆಸಿ, ನನಗೆ ನ್ಯಾಯ ಕಲ್ಪಿಸಿಲ್ಲ. ಹೀಗಾಗಿ ಸದರಿ ಬೆಳವಣಿಗೆಯಿಂದ ಮಾನಸಿಕ ಹಿಂಸೆ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನನಗೆ ಅಧಿಕಾರಿಗಳಿಂದ ನ್ಯಾಯ ಸಿಕ್ಕಿಲ್ಲ. ಹೀಗಾಗಿ ದಯಾಮರಣ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಜನತಾ ದರ್ಶನದಲ್ಲಿ ಮನವಿ ಮಾಡಿದರು.

ಬಾಧಿತನ ಮನವಿ ಆಲಿಸಿದ ಸಚಿವರು, ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ ಹಾಗೂ ಪೊಲೀಸರಿಗೆ ನಿರ್ದೇಶನ ನೀಡಿ, ಹತಾಶನಾಗಬೇಡ ಎಂದು ಇಮಾಮಸಾಬ್‍ಗೆ ಧೈರ್ಯ ತುಂಬಿದರು.

ಮತ್ತೊಂದೆಡೆ ವ್ಯಕ್ತಿಯೊಬ್ಬರು ತನ್ನ ಮಗ ಹತ್ಯೆಯಾಗಿದ್ದು, ನ್ಯಾಯ ಕಲ್ಪಿಸುವಂತೆ ಮನವಿ ಮಾಡಿದರು. ಹಾವೇರಿ ಜಿಲ್ಲೆಯ ಬ್ಯಾಡಗಿ ಮೂಲದ ಹೆಂಡತಿಯೊಂದಿಗೆ ಇದ್ದ ನಮ್ಮ ಮಗ ಹತ್ಯೆಯಾಗಿರುವ ಕುರಿತು ಮಾಹಿತಿ ಇದೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ನನ್ನ ಮಗನ ಸಾವಿನ ಕುರಿತು ನಿಖರ ಮಾಹಿತಿ ಹಾಗೂ ನ್ಯಾಯ ಕಲ್ಪಿಸುವಂತೆ ಮನವಿ ಮಾಡಿದರು.

Advertisement

ಹಾವೇರಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಬಾಧಿತರಿಗೆ ನ್ಯಾಯ ಕಲ್ಪಿಸುವಂತೆ ಸಚಿವ ಎಂ.ಬಿ.ಪಾಟೀಲ ಸೂಚನೆ ನೀಡಿದರು.

ಮತ್ತೊಂದೆಡೆ ಕಳೆದ ಎಪ್ರಿಲ್ 14 ರಂದು ನನ್ನ ಮಗ ಅಸಹಜ ಸಾವಿಗೀಡಾಗಿದ್ದಾನೆ. ಪೊಲೀಸರು ಸದರಿ ಪ್ರಕರಣವನ್ನು ಅಪಘಾತ ಎಂಬಂತೆ ಬಿಂಬಿಸಿದ್ದು, ಮೇಲ್ನೋಟಕ್ಕೆ ಅದು ಹತ್ಯೆ ಎಂಬುದು ಮನವರಿಕೆಯಾಗುತ್ತಿದೆ. ಮಗನ ಸಾವಿನಲ್ಲ ಅನುಮಾನ ಇದ್ದು, ಸಮಗ್ರ ತನಿಖೆ ನಡೆಸಿ, ನ್ಯಾಯ ಕಲ್ಪಿಸಿ ಎಂದು ಎಸ್ಪಿ ಕಛೇರಿಗೂ ನಾಲ್ಕೈದು ಬಾರಿ ಅಲೆದರೂ ಸ್ಪಂದಿಸಿಲ್ಲ ಎಂದು ಮಹಿಳೆಯೊಬ್ಬರು ವೇದಿಕೆಯಲ್ಲೇ ಕಣ್ಣೀರು ಹಾಕಿದರು.

ಅಹವಾಲು ಆಲಿಸಿದ ಸಚಿವ ಎಂ.ಬಿ.ಪಾಟೀಲ, ಸದರಿ ಪ್ರಕರಣದಲ್ಲಿ ಸಮಗ್ರವಾಗಿ ಮರು ತನಿಖೆ ನಡೆಸಬೇಕು, ತನಿಖಾಧಿಕಾರಿಯನ್ನು ಬದಲಿಸಿ ಎಂದು ಎಸ್ಪಿ ಅವರಿಗೆ ನಿರ್ದೇಶನ ನೀಡಿದರು.

ಕೊಳಚೆ ಪ್ರದೇಶದಲ್ಲಿ ಬಡವರಿಗೆ ಹಂಚಬೇಕಿದ್ದ ಬಹುತೇಕ ಮನೆಗಳು ಪೊಲೀಸರು, ರಾಜಕೀಯ ಪುಡಾರಿಗಳು, ಉಳ್ಳವರು, ಸಿರಿವಂತರ ಪಾಲಾಗಿವೆ. ಪರಿಣಾಮ ಕೊಳಚೆ ಪ್ರದೇಶದ ಬಹುತೇಕ ಮನೆಗಳಲ್ಲಿ ಬಡವರು ಬಾಡಿಗೆ ನೀಡಿ ವಾಸ ಮಾಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದೆ ಎಂದು ಸ್ವಯಂ ಸಚಿವರೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೊಳಚೆ ಪ್ರದೇಶದಲ್ಲಿರುವ ಮನೆಗಳಲ್ಲಿ ಮಾಲೀಕರು ಯಾರು, ಬಾಡಿಗೆ ಇರುವವರು ಯಾರು ಎಂಬೆಲ್ಲ ಸಮಗ್ರ ತನಿಖೆ ನಡೆಸಿ, ತಮಗೆ ತುರ್ತಾಗಿ ವರದಿ ಸಲ್ಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next