Advertisement

ಕುಡಿವ ನೀರಿಗಾಗಿ 2000 ವಿದ್ಯಾರ್ಥಿಗಳ ಹಾಹಾಕಾರ

11:45 AM Jun 08, 2022 | Team Udayavani |

ಕಲಬುರಗಿ: ಇದು ನಿಜಕ್ಕೂ ರಾಜ್ಯ ಸರ್ಕಾರದ ಪಾಲಿಗೆ ನಾಚಿಕೆಗೇಡಿನ ವಿಷಯ. ಆಳಂದ ತಾಲೂಕಿನ ಕಡಗಂಚಿ ಬಳಿ ಸ್ಥಾಪಿಸಿರುವ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ದಶಕವಾದರೂ ಒಪ್ಪಂದದಂತೆ ಸರ್ಕಾರ ನೀರು ಪೂರೈಕೆ ಮಾಡಲು ಸಾಧ್ಯವಾಗದೇ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 300ಕ್ಕೂ ಹೆಚ್ಚು ಸಿಬ್ಬಂದಿ ಪಡಬಾರದ ಕಷ್ಟ ಪಡುತ್ತಿದ್ದಾರೆ.

Advertisement

2009ರಲ್ಲಿ ವಿವಿ ಸ್ಥಾಪನೆ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ನಡೆದ ಒಪ್ಪಂದದಂತೆ ಸ್ಥಳೀಯವಾಗಿ ಭೂಮಿ, ನೀರು, ವಿದ್ಯುತ್‌ ಮತ್ತು ರಸ್ತೆ ಸಂಪರ್ಕ ಕಲ್ಪಿಸಿಕೊಡಬೇಕಾದದ್ದು ರಾಜ್ಯ ಸರ್ಕಾರದ ಕೆಲಸ. ಆದರೆ, ನಾನಾ ಕಾರಣಗಳಿಗಾಗಿ ಕುಡಿಯುವ ನೀರು ಪೂರೈಕೆ ಮಾಡುವ ಹೊಣೆಗಾರಿಯಿಂದ ಪ್ರತಿ ಬಾರಿ ಸರ್ಕಾರ ಮುಖ ತಿರುವುತ್ತದೆ. ಸಮಸ್ಯೆ ಬಗೆಹರಿಸಬೇಕಾದ ಕಲಬುರಗಿ ಜಿಲ್ಲಾಡಳಿತ, ಅಧಿಕಾರಿಗಳು ಪ್ರತಿ ಬಾರಿ ಕೈಗೊಂಡ ಯಡವಟ್ಟು ತೀರ್ಮಾನದಿಂದ ಸಮಸ್ಯೆ ಇನ್ನೂ ಬಿಕ್ಕಟ್ಟಾಗಿದೆ.

ನನೆಗುದಿಗೆ ಬಿದ್ದ ನೀರು ಪೂರೈಕೆ: ಕೇಂದ್ರೀಯ ವಿವಿ(ಸಿಯುಕೆ) ಆರಂಭವಾದಾಗಿನಿಂದ ಅಳಂದ ತಾಲೂಕಿನ ಅಮರ್ಜಾ ನದಿಯಿಂದ ನೀರು ಪೂರೈಕೆ ಮಾಡುವ ಕಾಮಗಾರಿ ನನೆಗುದಿಗೆ ಬಿದ್ದಿದೆ. ಮೂರು ವಿಸಿಗಳು, 5 ಜನ ಜಿಲ್ಲಾಧಿಕಾರಿಗಳು, ಮೂರು ಜನ ಪ್ರಾದೇಶಿಕ ಅಯುಕ್ತರು, ಮೂರು ಸರ್ಕಾರಗಳು ಬದಲಾದರೂ ಈವರೆಗೆ ಏನೂ ಆಗಿಲ್ಲ. ಈಗಲೇ ಯೋಜನೆ ಇನ್ನೂ ಟೆಂಡರ್‌ ಹಂತದಲ್ಲಿಯೇ ಇದೆ. ಇದು ರಾಜ್ಯ ಸರ್ಕಾರ ಕಾರ್ಯ ವೈಖರಿಯ ನಮೂನೆ. ಈ ಮಧ್ಯೆ ಹಲವು ಸಂಘಟನೆಗಳು ಹೋರಾಟ ಮಾಡಿದರೂ ಸರ್ಕಾರ, ಜಿಲ್ಲಾಡಳಿತ ಅಲುಗಾಡಿಲ್ಲ. ಈ ಮಧ್ಯೆ ಪ್ರತಿ ವರ್ಷ 1500ರಿಂದ 2000 ವಿದ್ಯಾರ್ಥಿಗಳು ದೇಶದ ನಾನಾ ಭಾಗದಿಂದ ಬಂದು ನೀರಿಗಾಗಿ ಪರಿತಪಿಸಿ ಹಾಗೋ ಹೀಗೋ ಕೋರ್ಸ್‌ ಮುಗಿಸಿ ಹೋಗಿದ್ದಾರೆ.

ಬೆಣ್ಣೆತೋರಾ ಯೋಜನೆ ಠುಸ್

ಅಮರ್ಜಾ ನದಿಯಲ್ಲಿ ನೀರಿನ ಕೊರತೆ, ಭೀಮಾ ನದಿಯಿಂದ ಅಮರ್ಜಾಕ್ಕೆ ನೀರು ತುಂಬಿಸಿ ಪ್ರತಿ ದಿನ 40 ಲಕ್ಷ ಲೀಟರ್‌ ನೀರು ಪೂರೈಕೆ ಮಾಡಲು ಸಾಧ್ಯವಾಗದೇ ಇದ್ದಾಗ 25 ಕೋಟಿ ರೂ. ವೆಚ್ಚದಲ್ಲಿ ಪೈಪ್‌ಲೈನ್‌ ಮೂಲಕ ಬೆಣ್ಣೆತೋರಾ ನದಿಯಿಂದಲೂ ನೀರು ಪೂರೈಕೆ ಮಾಡುವ ಯೋಜನೆ ರೂಪಿಸಲಾಗಿತ್ತು. ಅದು ದುಬಾರಿ ಅಗುವ ಲಕ್ಷಣ ಕಂಡು ಬಂದಾಗ ಪುನಃ ಅಮರ್ಜಾ ನದಿಗೆ ಜೋತು ಬೀಳಲಾಯಿತು.

Advertisement

55 ಕೋಟಿ ರೂ. ಹೊಸ ಯೋಜನೆ

ಈಗ ಮತ್ತೆ ಕುಡಿವ ನೀರಿನ ಸಮಸ್ಯೆ ನೀಗಿಸಲು ಬಿಜೆಪಿ ಸರ್ಕಾರವೂ ಪ್ರಯತ್ನ ಮಾಡುತ್ತಿದೆ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರವಷ್ಟೆ ಕೇಂದ್ರ ಸಚಿವ ಧಮೇಂದ್ರ ಪಧಾನ ಅವರೊಂದಿಗೆ ಮಾತುಕತೆ ಮಾಡಿದ್ದು, ಕೂಡಲೇ ಕುಡಿವ ನೀರಿನ ಸಂಬಂಧ ಇರುವ ಸಮಸ್ಯೆಗೆ ಇತಿಶ್ರೀ ಹಾಡುವ ಭರವಸೆ ನೀಡಿದ್ದಾರೆ. ಕೆಎನ್‌ಎನ್‌ಎಲ್‌ ಮುಖ್ಯ ಎಂಜಿನಿಯರ್‌ ಅವರು 55 ಕೋಟಿ ರೂ.ಗಳಲ್ಲಿ ಪೈಪ್‌ಲೈನ್‌ ಮುಖೇನ ಸಿಯುಕೆ ಕ್ಯಾಂಪಸ್‌ನಲ್ಲಿರುವ ಗ್ಯಾಲನ್‌ ಗಟ್ಟಲೇ ನೀರು ಸಂಗ್ರಹಿಸುವ ಟ್ಯಾಂಕ್‌ಗೆ ನೀರು ಬಂದು ಬೀಳುವಂತೆ ಮಾಡುವ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಈಗ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನದು ಬೊಮ್ಮಾಯಿ ಮತ್ತು ಸರ್ಕಾರದ ಇಚ್ಛೆ. ಸಿಯುಕೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ದೈವ.

ವಿವಿಗೆ ಕುಡಿಯುವ ನೀರು ಪೂರೈಕೆ ಹಿನ್ನೆಲೆಯಲ್ಲಿ ಸಾಕಷ್ಟು ಪತ್ರ ವ್ಯವಹಾರಗಳು ಈಗಲೂ ನಡೆಯುತ್ತಲೇ ಇವೆ. 13 ವರ್ಷಗಳಾದರೂ ನಮ್ಮ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಸ್ವತಃ ಕರೆ ನಿರ್ಮಾಣ ಮಾಡಿ ಮಳೆ ನೀರು ಸಂಗ್ರಹಿಸಿ ತುಸು ನೀರಿನ ಬವಣೆ ತಪ್ಪಿಸಲು ಹೆಣಗಾಡಿದ್ದೇವೆ. ಈಗ ಹೊಸ ಯೋಜನೆ ರೂಪಿಸಲಾಗಿದೆ. ಕಾರ್ಯಗತವಾಗಬೇಕು. 2ಸಾವಿರ ವಿದ್ಯಾರ್ಥಿಗಳು, 300ಕ್ಕೂ ಹೆಚ್ಚು ಸಿಬ್ಬಂದಿ ಪ್ರಶ್ನೆ ಇದೆ. ಪ್ರೊ| ಬಟ್ಟು ಸತ್ಯನಾರಾಯಣ, ಸಿಯುಕೆ ಕುಲಪತಿ

ಸೂರ್ಯಕಾಂತ ಎಂ. ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next