ಬೀದರ: ಜಿಲ್ಲೆಯಲ್ಲಿ ಈದ್ ಉಲ್ ಅದಾ (ಬಕ್ರೀದ್) ಹಬ್ಬವನ್ನು ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಾಂತಿಯುತವಾಗಿ ಆಚರಣೆಗೆ ಜಿಲ್ಲಾಡಳಿತ ಸಹಕಾರ ನೀಡಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಘಟಕ ಮನವಿ ಮಾಡಿದೆ.
ಸಂಘಟನೆ ಜಿಲ್ಲಾಧ್ಯಕ್ಷ ಮುಹಮ್ಮದ್ ನಿಝಾಮುದ್ದೀನ್ ನೇತೃತ್ವದಲ್ಲಿ ಪ್ರಮುಖರು ಜಿಲ್ಲಾಕಾರಿ ಆರ್. ರಾಮಚಂದ್ರನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಆ. 1ರಿಂದ 3ರವರೆಗೆ ಮುಸ್ಲಿಂ ಬಾಂಧವರ ಎರಡನೇ ಪ್ರಮುಖ ಹಬ್ಬ ಈದ್ ಉಲ್ ಅದಾ ಆಚರಸಲಾಗುತಿದೆ. ಕುರ್ಬಾನಿ (ಪ್ರಾಣಿ ಬಲಿ) ಈ ಹಬ್ಬದ ಮುಖ್ಯ ಮತ್ತು ಕಡ್ಡಾಯ ಆರಾಧನೆಯಾಗಿದೆ. ಈ ಸಂಬಂಧ ಕುರಿ, ಮೇಕೆ ಮತ್ತು ಅನುಮತಿಸಿದ ದೊಡ್ಡ ಪ್ರಾಣಿಗಳ ಖರೀದಿ, ಸಾಗಣೆಗೆ ಹಾಗೂ ಕುರ್ಬಾನಿಗೆ ಜಿಲ್ಲಾಡಳಿತ ಸಹಕರಿಸಬೇಕು ಎಂದು ಕೋರಿದ್ದಾರೆ.
ಈ ಹಬ್ಬವು ರೈತರು, ವ್ಯಾಪಾರಸ್ಥರು, ಕುರೈಷಿಗಳ ಆದಾಯ ಹಾಗೂ ಜೀವನಾಧಾರದ ಜೊತೆ ಸಂಬಂಧ ಹೊಂದಿದೆ. ಮುಸ್ಲಿಮರು ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಸ್ವಚ್ಛತೆ, ಮಾಸ್ಕ್ ಧರಿಸುವುದು, ಕೈತೊಳೆಯುವುದು ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಪಾಲಿಸುವರು ಎಂದು ತಿಳಿಸಿದ್ದಾರೆ.
ಹಬ್ಬದ ದಿನದಂದು ಮುಸ್ಲಿಮರು (ಮಕ್ಕಳು ಮತ್ತು ಹಿರಿಯರು ಹೊರತುಪಡಿಸಿ) ಮಸೀದಿ, ಈದ್ಗಾ ಹಾಗೂ ಬಯಲು ಪ್ರದೇಶದಲ್ಲಿ ನಮಾಜ್ ಮಾಡುವರು. ಈ ವೇಳೆ ಮುಂಜಾಗ್ರತೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಸಾಂಪ್ರದಾಯಕವಾಗಿ ಪರಸ್ಪರ ಅಪ್ಪಿಕೊಂಡು ಹಬ್ಬದ ಶುಭಾಶಯ ಹೇಳುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಸಲಹಾ ಮಂಡಳಿ ಸದಸ್ಯ ಮುಹಮ್ಮದ್ ಅಸಿಫುದ್ದೀನ, ಜಿಲ್ಲಾ ಉಪಾಧ್ಯಕ್ಷ ಮುಹಮ್ಮದ್ ಆರಿಫುದ್ದೀನ, ಮುಜ್‌ತಬಾ ಖಾನ್, ಸದಸ್ಯ ರಫೀಕ್ ಅಹ್ಮದ್ ಇದ್ದರು.