ಹೊಸಕೋಟೆ: ತಾಲೂಕಿನಲ್ಲಿ ಡಿ.5ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಅಧಿಕಾರಿಗಳು ಸಹಕರಿಸಬೇಕು ಎಂದು ಚುನಾವಣಾಧಿಕಾರಿ ಎಚ್.ಎನ್. ನಾಗರಾಜ್ ಮನವಿ ಮಾಡಿದರು. ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾನಾ ತಂಡಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಚುನಾವಣೆಗಾಗಿ ಈಗಾಗಲೇ ನ.11ರಿಂದಲೇ ನೀತಿಸಂಹಿತೆ ಜಾರಿಗೊಂಡಿದ್ದು ಅಧಿಕಾರಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ತಾಲೂಕಿನ ಗಡಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ 8 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು ಪೊಲೀಸ್ ಒಳಗೊಂಡಂತೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿದ್ದು 8 ಗಂಟೆಗಳ ಅವಧಿಯಂತೆ 3 ಪಾಳಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.
ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿರುವ ಗ್ರಾಮಗಳು: ಬೆಂಡಿಗಾನಹಳ್ಳಿ, ಉಪ್ಪಾರಹಳ್ಳಿ, ಬಾಗೂರು, ಕಟ್ಟಿಗೇನಹಳ್ಳಿ, ಹಿಂಡಿಗನಾಳ, ಜಿನ್ನಾಗರ, ರಾಮಸಂದ್ರ ಗಡಿ, ಹೊಸಕೋಟೆ ಟೋಲ್. ವಾಹನಗಳಲ್ಲಿ ಯಾವುದೇ ತರಹವಾದ ವಸ್ತುಗಳು, ಹಣ ಸಾಗಣೆಯನ್ನು ಪರಿಶೀಲಿಸಿ ಅಕ್ರಮಗಳು ಕಂಡುಬಂದಲ್ಲಿ ಪ್ರಕರಣ ದಾಖಲಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓಗಳನ್ನು ಒಳಗೊಂಡ ಹೋಬಳಿವಾರು 5 ಸಂಚಾರಿ ತಂಡದ ಅಧಿಕಾರಿಗಳು ಯಾವುದೇ ಉಲ್ಲಂಘನೆ, ಮತದಾರರನ್ನು ಪ್ರೇರೇಪಿಸುವ, ಆಮಿಷಕ್ಕೆ ಒಳಪಡುವ ಚಟುವಟಿಕೆಗಳು ಕಂಡುಬಂದಲ್ಲಿ ನಿಗಾವಹಿಸಬೇಕು.
ವಿಡಿಯೋ ಕಣ್ಗಾವಲುತಂಡವು ರಾಜಕೀಯ ಪಕ್ಷಗಳು, ಚುನಾವಣಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನಡೆಸುವ ಸಭೆ, ಸಮಾರಂಭಗಳನ್ನು ಚಿತ್ರೀಕರಿಸಬೇಕು. ವಿಡಿಯೋ ವೀಕ್ಷಣಾ ತಂಡದ ಸದಸ್ಯರು ಚಿತ್ರೀಕರಣವನ್ನು ಪರಿಶೀಲಿಸಿ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾವಣೆ ಸಂಬಂಧ ಶೀಘ್ರದಲ್ಲಿಯೇ ಪ್ರತ್ಯೇಕ ನಿಯಂತ್ರಣಾ ಕೊಠಡಿಯನ್ನು ಸಹ ಸ್ಥಾಪಿಸಿ ಸೂಕ್ತ ಸಿಬ್ಬಂದಿಯನ್ನು ನೇಮಿಸಲಾಗುವುದು.
ಈಗಾಗಲೇ ತಾಲೂಕಿನಾದ್ಯಂತ ಎಲ್ಲಾ ತರಹವಾದ ಫ್ಲೆಕ್ಸ್, ಬ್ಯಾನರ್‌ಗಳನ್ನು ತೆರವುಗೊಳಿಸಿದ್ದು, ರಾಜಕೀಯ ವ್ಯಕ್ತಿಗಳಿರುವ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿರುವ ನಾಮಫಲಕಗಳನ್ನು ಪೇಪರ್‌ನಿಂದ ಮುಚ್ಚಬೇಕು. ಅನುಮತಿ ಪಡೆಯದೆ ಯಾವುದೇ ಭಿತ್ತಿಪತ್ರ, ಫ್ಲೆಕ್ಸ್‌ಗಳು ಕಂಡುಬಂದಲ್ಲಿ ಕಾನೂನಿನಡಿ ಕ್ರಮವಹಿಸಬೇಕು ಎಂದು ಸೂಚಿಸಿದರು. ಇದುವರೆವಿಗೂ ಚುನಾವಣೆಗೆ ಸ್ಪರ್ಧಿಸಲು 14 ನಾಮಪತ್ರಗಳನ್ನು ಪಡೆಯಲಾಗಿದೆ.
ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನಡೆಯುವ ಮೆರವಣಿಗೆ, ಊಟ, ತಿಂಡಿ ವಿತರಣೆಯಂತಹ ಎಲ್ಲಾ ಚಟುವಟಿಕೆಗಳನ್ನೂ ಸಹ ವಿಡಿಯೋ ಚಿತ್ರೀಕರಣ ಮಾಡಬೇಕು. ಚುನಾವಣೆಯ ನೀತಿ ಸಂಹಿತೆ ಜಾರಿಯ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು ಪ್ರತಿದಿನದ ಕಾರ್ಯಚಟುವಟಿಕೆಗಳ ಬಗ್ಗೆ ಅವರಿಗೆ ಮಾಹಿತಿ ಸಲ್ಲಿಸಬೇಕು ಎಂದು ತಿಳಿಸಿದರು.
ಪೊಲೀಸ್ ಎನ್.ಬಿ ಸಕ್ರಿ, ಅಬಕಾರಿ ಉಪಅಧೀಕ್ಷಕ ಎಲ್. ಜನಯ್, ವಲಯ ಅಬಕಾರಿ ನಿರೀಕ್ಷಕ ರಾಜಶೇಖರ್ ಆರ್. ಕರಡಕಲ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್.ಬಿ.ಸಕ್ರಿ, ನಗರಸಭೆ ಪೌರಾಯುಕ್ತ ನಿಸಾರ್ ಅಹಮದ್ ಉಪಸ್ಥಿತರಿದ್ದರು.