ಸುರಪುರ: ತ್ರಿಪುರಾ ರಾಜ್ಯದಲ್ಲಿ ಇತ್ತೀಚೆಗೆ ಮುಸ್ಲಿಮರ ಪ್ರಾರ್ಥನಾ ಸ್ಥಳಗಳು ಹಾಗೂ ಮುಸ್ಲಿಂ ಮಹಿಳೆಯರ ಮೇಲೆ ನಡೆಸಿದ ದಾಳಿ ಖಂಡಿಸಿ ಸುರಪುರ-ರಂಗಂಪೇಟೆ ಮುಸ್ಲಿಮರು ಮತ್ತು ಜಾತ್ಯತೀತ ನಿವಾಸಿಗಳು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದರು.
ದೇಶದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ತ್ರಿಪುರಾದಲ್ಲಿ ಜಾತಿ, ಧರ್ಮಗಳ ಮಧ್ಯೆ ಜಗಳ ಹಚ್ಚಿ ಕೋಮ ಗಲಭೆ ಸೃಷ್ಟಿಸಿ ಅಶಾಂತಿ ಮೂಡಿಸಲಾಗುತ್ತಿದೆ. ಅಲ್ಲಿಯ ಪೊಲೀಸರು ದಾಳಿ ಘಟನೆಯನ್ನು ತಡೆಯುವಲ್ಲಿ ಸಂಪೂರ್ಣ ವಿಫಲರಾಗದ್ದಾರೆ ಎಂದು ಆರೋಪಿಸಿದರು.
ತ್ರಿಪುರಾದಲ್ಲಿ ಗಲಭೆ ಮತ್ತು ಶಾಂತಿಭಂಗಕ್ಕೆ ಕಾರಣರಾದ ವ್ಯಕ್ತಿಗಳು ಮತ್ತು ಹಲ್ಲೆ ತಡೆಯುವಲ್ಲಿ ವಿಫಲರಾದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಹಲ್ಲೆಗೊಳ್ಳಗಾದ ಮುಸ್ಲಿಂ ಕುಟುಂಬಗಳಿಗೆ ರಕ್ಷಣೆ ಮತ್ತು ಪರಿಹಾರ ನೀಡಬೇಕು ಮತ್ತು ಪ್ರಾರ್ಥನಾ ಸ್ಥಳಗಳನ್ನು ಪುನಃ ನಿರ್ಮಿಸಬೇಕು. ವಾಸಿಂ ರಿಜ್ವಿ ಪುಸ್ತಕ ನಿಷೇಧಿಸಿ ಕಾನೂನು ಕ್ರಮ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮನವಿ ಸ್ವೀಕರಿಸಿದರು. ಮುಖಂಡರಾದ ಅಬ್ದುಲ್ ಗಫಾರ್ ನಗನೂರಿ, ಮುಫ್ಟಿ ಏಕ್ಬಾಲ್ ಒಂಟಿ, ಅಹ್ಮದ್ ಪಠಾಣ್, ರಾಹುಲ್ ಹುಲಿಮನಿ, ಶೇಖ್ ಮಹಿಬೂಬ್ ಒಂಟಿ, ಮುನವರ್ ಸಾಬ್ ಅರಕೇರಿ, ಅಬ್ದುಲ್ ಮಜೀದ್ ಖುರೇಷಿ, ಕಾಶಿಂ ಅಲಿ ಬಳಿಚಕ್ರ, ಖಾಲೀದ್ ಅಹ್ಮದ್ ತಾಳಿಕೋಟಿ, ಉಸ್ತಾದ್ ವಜಾಹತ್ ಹುಸೇನ್, ಅಬ್ದುಲ್ ರಹೀಂಸಾಬ್, ರಮೇಶ ಅರಕೇರಿ, ಮಾಳಪ್ಪ ಕಿರದಳ್ಳಿ ಸೇರಿ ಅನೇಕರು ಭಾಗವಹಿಸಿದ್ದರು.