ನವೆದಹಲಿ: ಕರ್ನಾಟಕ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಶಾಸಕ ಕೆ.ಜಿ.ಬೋಪಯ್ಯ ನೇಮಕ ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶನಿವಾರ ತಿರಸ್ಕರಿಸಿತು.
ಜತೆಗೆ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಯನ್ನು ನೇರ ಪ್ರಸಾರ ಮಾಡುವಂತೆಯೂ ನ್ಯಾ.ಎ.ಕೆ.ಸಿಕ್ರಿ ನೇತೃತ್ವದ ನ್ಯಾಯಪೀಠ ಆದೇಶ ನೀಡಿತು.
“ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನೇರ ಪ್ರಸಾರ ಮಾಡುವ ವ್ಯವಸ್ಥೆ ಅತ್ಯುತ್ತಮವಾದದು. ಇದರಿಂದ ಪಾರದರ್ಶಕ ವ್ಯವಸ್ಥೆ ಕಾಯ್ದು ಕೊಳ್ಳಬಹುದು’ ಎಂದು ನ್ಯಾ.ಎ.ಕೆ.ಸಿಕ್ರಿ, ನ್ಯಾ.ಎಸ್. ಬೋಬ್ಡೆ ನ್ಯಾ. ಅಶೋಕ್ ಭೂಷಣ್ ಅವರ ನ್ನೊಳಗೊಂಡ ಪೀಠ ಹೇಳಿತು. ಇದಕ್ಕಿಂತ ಹೆಚ್ಚಿಗೆ ನಿಮಗೇನು ಬೇಕು ಎಂದು ನ್ಯಾಯವಾದಿಗಳಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಲ್‌ರನ್ನು ನ್ಯಾಯ ಪೀಠ ಪ್ರಶ್ನಿಸಿತು. ಸ್ಥಳೀಯವಾಹಿನಿಗಳು ಪ್ರಕ್ರಿಯೆಯ ನೇರ ಪ್ರಸಾರ ನೀಡಲಿವೆ ಎಂದು ಹೇಳಿತು.
ನಿಲುವಲ್ಲಿ ಬದಲು: 34 ನಿಮಿಷ ನಡೆದ ವಾದ-ಪ್ರತಿವಾದದ ವೇಳೆ ಸಿಬಲ್-ಸಿಂಘ್ವಿ ಜೋಡಿ ಹಂಗಾಮಿ ಸ್ಪೀಕರ್‌ರನ್ನು ಬದಲಾಯಿಸಲೇಬೇಕೆಂಬ ಅಂಶಕ್ಕೆ ಒತ್ತು ನೀಡಲಿಲ್ಲ. ರಾಜ್ಯಪಾಲರ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆರಂಭದಲ್ಲಿಯೇ ಪ್ರಕ್ರಿಯೆಯ ನೇರ ಪ್ರಸಾರಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದ್ದರು. ಬಳಿಕ ಸಿಬಲ್- ಸಿಂಘ್ವಿ ಹಂಗಾಮಿ ಸ್ಪೀಕರ್ ಬದಲಾಯಿಸಬೇಕು ಎಂಬ ಮೂಲ ಉದ್ದೇಶದಲ್ಲಿ ಮಾರ್ಪಾಡು ಮಾಡಿಕೊಂಡರು.
ನೂತನ ಶಾಸಕರಿಗೆ ಪ್ರಮಾಣ ವಚನ ಸ್ವೀಕಾರಕ್ಕೆ ಮಾತ್ರ ಬೋಪಯ್ಯ ಹಂಗಾಮಿ ಸ್ಪೀಕರ್ ಆಗಲಿ. ಏಕೆಂದರೆ ರಾಜ್ಯಪಾಲರ ಆದೇಶದಲ್ಲಿ ವಿಶ್ವಾಸ ಮತ ಪ್ರಕ್ರಿಯೆಯ ಪ್ರಸ್ತಾಪ ಇಲ್ಲ ಎಂದರು ಸಿಬಲ್. ಆಗ ಮಧ್ಯಪ್ರವೇಶಿಸಿದ ನ್ಯಾ.ಸಿಕ್ರಿ, “ಹಾಗಿದ್ದರೆ ವಿಶ್ವಾಸ ಮತ ಪ್ರಕಿಯೆ ಯಾರು ನಡೆಸಿಕೊಡಬೇಕು’? ಎಂದು ಪ್ರಶ್ನಿಸಿದರು. ಅದಕ್ಕಾಗಿ ಹಿರಿಯ ಶಾಸಕರನ್ನು ನೇಮಕ ಮಾಡಬೇಕು. ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ ಈ ಶಿಷ್ಟಾಚಾರ ಇದೆ ಎಂದರು ಸಿಬಲ್. ಶಿಷ್ಟಾಚಾರ ಕಾನೂನು ಆಗಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಾಜ್ಯಪಾಲರಿಗೆ ಹಿರಿಯ ಶಾಸಕರನ್ನು ನೇಮಕ ಮಾಡಿ ಎಂದು ಆದೇಶ ನೀಡಲು ಸಾಧ್ಯವಿಲ್ಲ ಎಂದರು ನ್ಯಾ.ಸಿಕ್ರಿ.
ಮತ ವಿಭಜನೆ ಮೂಲಕ ಎಣಿಕೆ ಮಾಡಬೇಕು ಎಂದು ಸಿಬಲ್ ಕೇಳಿಕೊಂಡಾಗ ಯಡಿಯೂರಪ್ಪ ಪರ ವಾದಿಸಿದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ,”ಪ್ರತಿಯೊಂದು ವಿಚಾರಕ್ಕೂ ಅರ್ಜಿ ಸಲ್ಲಿಸಿದರೆ ಹೇಗೆ? ಸುಪ್ರೀಂ ಕೋರ್ಟ್ ಅವರಿಗಾಗಿಯೇ ಕಾಯುತ್ತದೆಯೇ? ಎಂದು ಕೇಳಿದರು.
ತೀರ್ಪಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ನ್ಯಾಯವಾದಿಗಳಾ ಸಿಬಲ್, ಸಿಂ Ì, “ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರನ್ನು ಬದಲಿಸಬೇಕೆಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯ ಬೇಕು ಎನ್ನುವುದೇ ನಮ್ಮ ಆದ್ಯತೆಯಾಗಿತ್ತು ಎಂದಿದ್ದಾರೆ.
ರಜೆ ಕಳೆಯಲು ಬಿಡಿ: ನ್ಯಾ..ಸಿಕ್ರಿ
“ಇನ್ನು ನಮಗೆ ಬೇಸಿಗೆ ರಜೆಯನ್ನು ಆರಾಮವಾಗಿ ಕಳೆಯಲು ಬಿಡಿ’. ತೀರ್ಪು ನೀಡಿದ ಬಳಿಕ ನ್ಯಾ.ಎ.ಕೆ.ಸಿಕ್ರಿ ತಿಳಿ ಹಾಸ್ಯದ ಧಾಟಿಯಲ್ಲಿ ಹೀಗೆಂದರು. ಅವರ ಮಾತಿಗೆ ಕೋರ್ಟ್‌ನಲ್ಲಿ ಎಲ್ಲರೂ ಗೊಳ್ಳನೆ ನಕ್ಕರು.ವಾದ ಮಂಡನೆ ಆರಂಭವಾದಾಗ ನ್ಯಾಯಪೀಠದ ಕ್ಷಮೆ ಯಾಚಿಸಿದ ಸಿಬಲ್, “ಶನಿವಾರ ರಜೆಯ ದಿನವಾಗಿದ್ದರೂ ನ್ಯಾಯಪೀಠಕ್ಕೆ ತೊಂದರೆ ಕೊಡಬೇಕಾದ ಪರಿಸ್ಥಿತಿ ಉಂಟಾಯಿತು’ ಎಂದರು. ಅದಕ್ಕೆ ನ್ಯಾ.ಎ.ಕೆ.ಸಿಕ್ರಿ “ನಾವು ನಮ್ಮ ಸಂವಿಧಾನಾತ್ಮಕ ಕರ್ತವ್ಯ ಮಾಡಬೇಕಲ್ಲವೇ?’ ಎಂದರು.