Advertisement

ನಾಳೆಯಿಂದ ಅಪ್ಪೆ ಟೀಚರ್‌ ತುಳುಚಿತ್ರ ಪ್ರದರ್ಶನ

09:20 AM Mar 22, 2018 | Team Udayavani |

ಉಡುಪಿ: ‘ಅಪ್ಪೆ ಟೀಚರ್‌’ ತುಳು ಚಲನಚಿತ್ರ ಮಾ. 23ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಕಿಶೋರ್‌ ಮೂಡಬಿದಿರೆ ತಿಳಿಸಿದ್ದಾರೆ. ಸುನಿಲ್‌ ನಾಯಕ ನಟನಾಗಿ, ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ದೇವದಾಸ್‌ ಕಾಪಿಕಾಡ್‌, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ, ಭೋಜರಾಜ ವಾಮಂಜೂರು, ಉಮೇಶ್‌ ಮಿಜಾರು ಸೇರಿದಂತೆ ಒಟ್ಟು 130ಕ್ಕೂ ಅಧಿಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ತುಳು ಚಿತ್ರರಂಗದ ಇತಿಹಾಸದಲ್ಲೇ ಅತೀ ಶೀಘ್ರದಲ್ಲಿ ಚಿತ್ರೀಕರಣಗೊಂಡು ಬಿಡುಗಡೆಯಾಗುತ್ತಿರುವ ಸಿನೆಮಾ ಇದಾಗಿದೆ. ಲಂಡನ್‌ನಲ್ಲಿಯೂ ಚಿತ್ರೀಕರಣಗೊಂಡಿರುವ ಮೊದಲ ತುಳು ಚಲನಚಿತ್ರ ಕೂಡ ಇದಾಗಿದೆ ಎಂದವರು ತಿಳಿಸಿದರು.

Advertisement

ತುಳುನಾಡಿನಾದ್ಯಂತ ಪ್ರದರ್ಶನ
ಉಡುಪಿಯ ಕಲ್ಪನಾ, ಕಾರ್ಕಳದ ರಾಧಿಕಾ, ಮೂಡಬಿದಿರೆಯ ಅಮರಶ್ರೀ, ಬೆಳ್ತಂಗಡಿಯ ಭಾರತ್‌, ಸುರತ್ಕಲ್‌ನ ನಟರಾಜ್‌, ಸುಳ್ಯದ ಸಂತೋಷ್‌, ಮಂಗಳೂರಿನ ಸಿನೆಪೊಲಿಸ್‌, ಪಿವಿಆರ್‌, ಭಾರತ್‌ ಸಿನೆಮಾ, ಉಡುಪಿಯ ಭಾರತ್‌ ಸಿನೆಮಾಗಳಲ್ಲಿ ‘ಅಪ್ಪೆ ಟೀಚರ್‌’ ಪ್ರದರ್ಶನಗೊಳ್ಳಲಿದೆ. ಚಿತ್ರದ ಟ್ರೈಲರ್‌ ಬಿಡುಗಡೆಯಾದ ದಿನದಂದೇ ಫೇಸ್‌ಬುಕ್‌ನಲ್ಲಿ 43,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎಂದು ಕಿಶೋರ್‌ ತಿಳಿಸಿದರು.

ಹಾಸ್ಯ, ಗಟ್ಟಿ ಕತೆ
ಹಾಸ್ಯ ಪ್ರಧಾನವಾಗಿರುವ ಈ ಸಿನೆಮಾ ಉತ್ತಮ ಕತೆಯನ್ನು ಕೂಡ ಹೊಂದಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ, ಮನೋರಂಜನೆ ಈ ಸಿನೆಮಾದ ಮೂಲಕ ಸಿಗಲಿದೆ. ತಾಂತ್ರಿಕತೆ, ಇತರ ಕೆಲಸಗಳು ಸೇರಿದಂತೆ ಒಟ್ಟು ಸಿನೆಮಾ ಕನ್ನಡ ಚಲನಚಿತ್ರದ ಗುಣಮಟ್ಟದಲ್ಲಿಯೇ 1 ಕೋ.ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡಿದೆ.

‘ಅಪ್ಪೆ ಟೀಚರ್‌’ ತಾಯಿಯೇ ಗುರು ಎಂಬರ್ಥದಲ್ಲಿ ನಿರೂಪಿಸಲ್ಪಟ್ಟು ಸುಂದರ ಕಥೆಯನ್ನು ಹೇಳುತ್ತದೆ. ಹಾಸ್ಯದ ಹೊನಲಿನ ಜತೆ ಕತೆ ಸಾಗುತ್ತದೆ. ಹೊರಗಿನ ಪ್ರಪಂಚವನ್ನೆ ಮರೆಸುವ ಶಕ್ತಿ ಈ ಸಿನೆಮಾಕ್ಕಿದೆ ಎಂಬ ವಿಶ್ವಾಸ ನನ್ನದು. ಸಿನೆಮಾದಲ್ಲಿ 4 ಹಾಡುಗಳಿದ್ದು ಕನ್ನಡ ಚಿತ್ರರಂಗದ ಹಿನ್ನೆಲೆ ಸಂಗೀತಗಾರ ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಸ್ವಯಂಪ್ರಭ ಎಂಟರ್‌ಟೈನ್‌ಮೆಂಟ್‌ ಆ್ಯಂಡ್‌ ಪ್ರೊಡಕ್ಷನ್‌ ಬ್ಯಾನರ್‌ ಅಡಿಯಲ್ಲಿ ಸಿನೆಮಾ ಮೂಡಿಬಂದಿದೆ ಎಂದು ಚಾಲಿಪೋಲಿಲು, ಚಂಡಿಕೋರಿ ಸೇರಿದಂತೆ 15ಕ್ಕೂ ಅಧಿಕ ತುಳು, ಕನ್ನಡ ಸಿನೆಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ದುಡಿದು ಇದೀಗ ಚೊಚ್ಚಲ ತುಳುಚಿತ್ರವನ್ನು ಪೂರ್ಣ ಪ್ರಮಾಣದಲ್ಲಿ ನಿರ್ದೇಶಿಸಿರುವ ಕಿಶೋರ್‌ ಮೂಡಬಿದಿರೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next