ಕಲಬುರಗಿ: ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಬಲಪಡಿಸುವ ಮತ್ತು ಆಯಾ ಪ್ರದೇಶಗಳಲ್ಲಿ ಜನರಿಗೆ, ಆರ್ಥಿಕವಾಗಿ ಸಶಕ್ತರಲ್ಲದ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಉದನೂರು ರಸ್ತೆಯಲ್ಲಿರುವ ಅಪ್ಪಾಜಿ ಗುರುಕುಲ ಆಂಗ್ಲಮಾಧ್ಯಮ ಶಾಲೆ ಆಡಳಿತ ಮಂಡಳಿ ಪ್ರಸಕ್ತ ಸಾಲಿನಲ್ಲಿ 50 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡುವ ನಿರ್ಧಾರವನ್ನು ಪ್ರಕಟಿಸಿದೆ.
ಇದು ಸಾಧ್ಯವಾಗಿದ್ದು ಜಿಡಗಾದ ಡಾ| ಮುರುಘರಾಜೇಂದ್ರ ಮಹಾ ಸ್ವಾಮೀಜಿ ಆಶೀರ್ವಾದ ಹಾಗೂ ಲಿಂ| ಶಿವಯೋಗಿ ಸಿದ್ಧರಾಮ ಶಿವಯೋಗಿಗಳ ಸಂಕಲ್ಪದಿಂದ. ಪ್ರಸಕ್ತ ಸಾಲಿನಲ್ಲಿ 6,7 ಮತ್ತು 8ನೇ ತರಗತಿಯ ಒಟ್ಟು 50 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುತ್ತದೆ ಎಂದು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಭಾಗಮ್ಮ ರಾಜಕುಮಾರ ಉದನೂರ, ಕಾರ್ಯದರ್ಶಿ ರಾಜುಕುಮಾರ ಉದನೂರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಿನ ಪೀಠಾಧಿಧಿಪತಿ ಡಾ| ಮುರುಘೇಂದ್ರ ಮಹಾಸ್ವಾಮೀಜಿ ನೇತೃತ್ವದಲ್ಲಿ ಸಂಕಲ್ಪ ಯಾತ್ರೆ ವಿಶೇಷ ಕಾರ್ಯಕ್ರಮ 2018ರಲ್ಲಿ ಜರುಗಲಿದೆ. ಆಗ 770 ಮಂಟಪಕ್ಕೆ ಪೂಜೆ, 770 ಸ್ವಾಮಿಗಳ ಪಾದಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜಿಡಗಾ ಶ್ರೀಗಳ ಹೆಸರಿನಲ್ಲಿರುವ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯು ಬಡ ಮತ್ತು ಹಿಂದುಳಿದ ಮಕ್ಕಳಿಗೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ 50 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗುತ್ತಿದೆ.
ಆರ್‌ಟಿಇ ಪ್ರವೇಶವು ಇದಕ್ಕೆ ಹೊರತುಪಡಿಸಿದೆ ಎಂದು ಹೇಳಿದರು. ಕಳೆದ 2009-2010ರಲ್ಲಿ ಕೇವಲ ಎಂಟು ಮಕ್ಕಳು ಹಾಗೂ ಮೂವರು ಶಿಕ್ಷಕರಿಂದ ಆರಂಭಗೊಂಡ ಶಾಲೆ ಯಲ್ಲಿ ಈಗ 212 ಮಕ್ಕಳು, 12 ಶಿಕ್ಷಕರು, ಐವರು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಾಲೆ ಯಲ್ಲಿ ಪಾಠದೊಂದಿಗೆ ಸಾಂಸ್ಕೃತಿಕ ಚಟುವಟಿಕೆ, ಸಾಹಿತ್ಯದ ಪರಿಜ್ಞಾನ, ಸಂಗೀತ, ಲಲಿತಕಲೆ, ಕ್ರೀಡಾಸಕ್ತಿ ಮೂಡಿಸಲಾಗುತ್ತಿದೆ. ಪ್ರಾಥಮಿಕ ಹಂತದಿಂದಲೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಕಿರು ಪರೀಕ್ಷೆ, ಮೌಖೀಕ ಪರೀಕ್ಷೆ, ಗುಂಪು ಚರ್ಚೆ, ಸಂವಾದ ಮುಂತಾದ ಶೈಕ್ಷಣಿಕ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಉಚಿತವಾಗಿ ಪ್ರವೇಶ ನೀಡಲಾಗುತ್ತಿದೆ ಎನ್ನುವ ಕಾರಣಕ್ಕೆ ಶಾಲೆಯ ಕುರಿತು ಅಲ್ಲಗಳೆಯಬೇಕಿಲ್ಲ. ಎಲ್ಲಾ ಸೌಕರ್ಯಗಳನ್ನು ಶಾಲೆ ಹೊಂದಿದೆ. ಯಾವುದೇ ವರ್ಗ ಪ್ರವೇಶಕ್ಕೆ ಡೂನೇಷನ್ ಪಡೆಯುತ್ತಿಲ್ಲ. ಶಾಲೆ ಉತ್ತಮ ಆಟದ ಮೈದಾನ, ಶೌಚಾಲಯ, ಹವಾನಿಯಂತ್ರಿತ ಕೋಣೆಗಳನ್ನು ಶಾಲೆ ಹೊಂದಿದೆ. ಶುದ್ಧ ಕುಡಿಯುವ ನೀರಿನ ಘಟಕ, ಕ್ರೀಡಾ ಸಾಮಗ್ರಿಗಳಿವೆ. ಅನುಭವಿ ವೈದ್ಯರಿಂದ ತಪಾಸಣೆ, ಆರೋಗ್ಯ ಶಿಬಿರ ಸಹ ಹಮ್ಮಿಕೊಳ್ಳಲಾಗುತ್ತಿದೆ.
ಮಕ್ಕಳ ಪ್ರಗತಿ ಪರಿಶೀಲನೆಗೆ ಪಾಲಕ, ಪೋಷಕರ ಸಭೆಯನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ: 9481872009ಕ್ಕೆ ಅಥವಾ ಶಾಲೆಯಲ್ಲಿನ ಪ್ರಾಚಾರ್ಯರನ್ನು ಭೇಟಿಯಾಗಬಹುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಶೀಲಾ, ಪ್ರಾಚಾರ್ಯ ಮನೋಹರ ಪೋತಾರ ಹಾಜರಿದ್ದರು.