Advertisement

ಅಪ್ಪಾ…ಐ ಲವ್‌ ಯೂ ಪಾ… 

06:00 AM Jul 06, 2018 | |

ನಾನು ನೋಡಿದ ಮೊದಲ ವೀರ… ಬಾಳು ಕಲಿಸಿದ ಸಲಹೆಗಾರ – ಈ ಮಧುರ ಹಾಡಿನ ಸಾಲುಗಳನ್ನು ಓದುತ್ತಲೇ, ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಿಮಗೆಲ್ಲರಿಗೂ ಖಂಡಿತ ತಿಳಿದೀತು. ಹೌದು, ಜನಕ, ಪಿತ, ಡ್ಯಾಡಿ, ಅಬ್ಬು, ಬಾಬಾ- ಹೀಗೆ ಹಲವಾರು ನಾಮಗಳಿಂದ ಕರೆಯಲ್ಪಡುವ ಏಕಮೇವ, ಸರಳಮಾತಿನಲ್ಲಿ ಹೇಳಬೇಕೆಂದರೆ ಅಪ್ಪ. ತಾನು ಎಲ್ಲಾ ಕಡೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ದೇವರು ತಾಯಿಯನ್ನು ಸೃಷ್ಟಿಸಿದ. ಅಂತೆಯೇ ತನ್ನಿಂದ ಎಲ್ಲರನ್ನೂ ಸಲಹಲು ಸಾಧ್ಯವಿಲ್ಲವೆಂದು ತಂದೆಯನ್ನು ಸೃಷ್ಟಿಸಿದ. ಪ್ರತಿ ತಂದೆಯೂ ತನ್ನ ಮಗಳಲ್ಲಿ ಅವರ ತಾಯಿಯ ಛಾಯೆಯನ್ನು ಕಾಣಲು ಬಯಸಿದರೆ, ಮಗಳು ತನ್ನ ಜೀವನ ಸಂಗಾತಿಯಲ್ಲಿ ತಂದೆಯು ನೀಡುತ್ತಿದ್ದ ಪ್ರೀತಿಗಾಗಿ ಹುಡುಕುತ್ತಾಳೆ. ಬೇರೆ ಬೇರೆ ಜಾತಿ-ಮತದವರು ವಿಭಿನ್ನ ರೀತಿಯಲ್ಲಿ ತಮ್ಮ ತಂದೆಯನ್ನು ಸಂಭೋದಿಸಿದರೂ ಸಹ, ಈ ಸಂಬಂಧದಲ್ಲಿರುವ ನಿಸ್ವಾರ್ಥ ಪ್ರೀತಿ ಎಲ್ಲಾ ಜಾತಿ-ಮತಗಳಿಗೂ ಒಂದೇ. ತನ್ನ ಕೂಸಿನ ಖುಷಿಯಲ್ಲೇ ಆನಂದ ತಂದುಕೊಳ್ಳುವ ಪ್ರೀತಿಯ ಸಂಕೇತ ಅಪ್ಪ.

Advertisement

ತಂದೆಯೆಂದರೆ ಮಗಳ ಮೊದಲ ಪ್ರೀತಿ ಹಾಗೂ ಮಗನ ಮೊದಲ ಹೀರೋ ಎಂದರ್ಥ. ಸಾಮಾನ್ಯವಾಗಿ ಅಪ್ಪಂದಿರಿಗೆ ಹೆಣ್ಣು ಮಕ್ಕಳೆಂದರೆ ಹೆಚ್ಚು ಪ್ರೀತಿ, ಅಕ್ಕರೆ. ಅಂತೆಯೇ ನನ್ನ ತಂದೆಯೂ ಸಹ “ಮಗಳು ಬೇಕು’ ಎಂದು ಪ್ರತಿ ವ್ಯಾಮೋಹ ಹೊಂದಿದ್ದರು ಎಂದು ಅಜ್ಜಿ ಯಾವಾಗಲೂ ಹೇಳುತ್ತಾರೆ. ನವಮಿಯಂದು ಹುಟ್ಟಿದ ನನಗೆ ಆ ಶಿವನ ಸತಿಯ ನಾಮದ ಅರ್ಥವುಳ್ಳ ಶಿವರಂಜನಿ ಎಂಬ ಹೆಸರು ನೀಡಿದರು. “ಏನಿದು! ಇಷ್ಟು ಉದ್ದ ಹೆಸರು!’ ಎಂದು ಅಂದು ಶುರುವಾದ ನನ್ನ ಉದ್ಗಾರ ಇಂದಿಗೂ ನಿಲ್ಲಲಿಲ್ಲ. ಕೆಲಸದ ವ್ಯವಹಾರದ ಸಲುವಾಗಿ ಅಪ್ಪ ಮನೆಯಿಂದ  ದೂರ ಇರಬೇಕಾಗಿತ್ತು. ನಾನು ಅವರನ್ನು ಭೇಟಿ ಮಾಡುತ್ತಿದ್ದದ್ದು ವಾರಾಂತ್ಯದಲ್ಲಿ ಮಾತ್ರ. ಶನಿವಾರ ಬಂತೆಂದರೆ ನನ್ನ ಖುಷಿಗೆ ಪಾರವೇ ಇರುತ್ತಿರಲಿಲ್ಲ. ಬೆಳಗ್ಗೆ ಬೇಗನೆ ಎದ್ದು , “”ಅಪ್ಪ ಇವತ್ತು ಬರ್ತಾರಾ? ಅವರು ಬರುವಾಗ ಎಷ್ಟು ಹೊತ್ತಾಗುತ್ತೆ?” ಅಂತ ಕೇಳಿದ್ದನ್ನೇ ಕೇಳಿ ಅಮ್ಮನ ತಲೆ ತಿನ್ನುತ್ತಿದ್ದೆ. ಅಪ್ಪನಿಗೂ ಸಹ ತನ್ನ ಪುಟ್ಟ ರಾಜಕುಮಾರಿಯನ್ನು ನೋಡುವ ತವಕ. ಬಂದೊಡನೆ ನನ್ನನ್ನು ಎತ್ತಿಕೊಂಡು, ಮುದ್ದಾಡಿ, ನನ್ನ ಇಡೀ ವಾರದ ಕಥೆಗಳನ್ನು, ಅಮ್ಮನ ಬಗ್ಗೆ ದೂರುಗಳನ್ನು ಕೇಳಿ, ಮಗಳು ಮಾಡಿದ್ದೇ ಸರಿ ಎಂದು ಅತ್ತು ಹೇಳುವವರೆಗೂ ನನಗೆ ಸಮಾಧಾನವಿರುತ್ತಿರಲಿಲ್ಲ. ಆ ಎರಡು ದಿನಗಳನ್ನು ಮೋಜಿನಿಂದ ಕಳೆದು, ಮತ್ತೆ ಅಪ್ಪನಿಗೆ “ಟಾಟಾ’ ಹೇಳುವ ಸಮಯ ಬಂದಾಗ ಮನೆಯಲ್ಲಿ ಎಲ್ಲರ ಕಣ್ಣಂಚಿನಲ್ಲೂ ಹನಿ ಜಾರಲು ತಯಾರಾಗಿರುತ್ತಿತ್ತು. ಪ್ರತಿ ಬಾರಿಯೂ ಸಹ ಅಪ್ಪನ ಕೈಹಿಡಿದು, ಹೆಜ್ಜೆ ಬೆಸೆಯುತ್ತಾ ನಡೆದಾಗ ಮನಸ್ಸಿಗೆ ಆಗುವ ಸಂತಸವನ್ನು ಬರಿಯ ಶಬ್ದಗಳಲ್ಲಿ ಬಣ್ಣಿಸಲು ಖಂಡಿತ ಸಾಧ್ಯವಿಲ್ಲ. “ನೀನು ನಿನ್ನ ತಂದೆಯ ಜೆರಾಕ್ಸ್‌ ಕಾಪಿ’ ಎಂದು ಬಂಧು-ಮಿತ್ರರು ಹೇಳಿದರಂತೂ ಮನಸ್ಸು  ಖುಷಿಯಿಂದ ಹುಚ್ಚು ನೃತ್ಯಮಾಡಲು ಪ್ರಾರಂಭಿಸುತ್ತದೆ.

ಕ್ಷಣಮಾತ್ರದಲ್ಲಿ ಹತ್ತು ವರ್ಷಗಳು ಕಳೆದವು. ಈಗ ಎಲ್ಲವೂ ಬದಲಾಗಿದೆ. ಅಂದು ಕ್ಲಿಕ್ಕಿಸಿದ ಫೋಟೋಗಳನ್ನೆಲ್ಲಾ ನೋಡಿ, ಇಂದೂ ಸಹ ಅಪ್ಪ ಮಕ್ಕಳಂತೆ ಮುಗ್ಧ ನಗೆ ಬೀರುತ್ತಾರೆ. ಇಂದು ಯಾರ ಬಳಿಯೂ ಸಮಯವಿಲ್ಲವಾಗಿದೆ. ಅಪ್ಪ ಅವರ ಕೆಲಸದಲ್ಲಿ ಮಗ್ನರಾಗಿದ್ದಾರೆ. ನಾನು ನನ್ನ ಓದಿನಲ್ಲಿ ಬ್ಯುಸಿ. ಅಂದಿನಂತೆ ಗಂಟೆಗಟ್ಟಲೆ ಹರಟೆಯಿಲ್ಲ, ಅಮ್ಮನ ಬಗ್ಗೆ ದೂರುಗಳಿಲ್ಲ, ಹೆಗಲ ಸವಾರಿಯಿಲ್ಲ, ಸಂಜೆಯ ವಾಕಿಂಗ್‌ ಇಲ್ಲ. ಇದ್ಯಾವುದೂ ಇಲ್ಲದಿದ್ದರೂ ಸಹ ಒಂದು ವಿಷಯ ಅಂದಿನಂತೆಯೇ ಉಳಿದಿದೆ. ಹೌದು, ಆ ಪ್ರೀತಿ, ವಾತ್ಸಲ್ಯ, ಅಕ್ಕರೆ! ನಮ್ಮಲ್ಲಿ ಯಾರೂ ಬಾಯ್ಬಿಟ್ಟು ಇದನ್ನು ಹೇಳದಿದ್ದರೂ ಸಹ ಆ ನಿಷ್ಕಲ್ಮಶ, ಶುಭ್ರ ಕಣ್ಣುಗಳು ಎಲ್ಲವನ್ನೂ ಹೇಳಿಬಿಟ್ಟವು!

ಶಿವರಂಜನಿ, ದ್ವಿತೀಯ ಪಿಯುಸಿ ಗೋವಿಂದದಾಸ ಪದವಿಪೂರ್ವ ಕಾಲೇಜು, ಸುರತ್ಕಲ್‌
 

Advertisement

Udayavani is now on Telegram. Click here to join our channel and stay updated with the latest news.

Next