ನಾನು ನೋಡಿದ ಮೊದಲ ವೀರಾ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಾರ ಅಪ್ಪ… ಈ ಹಾಡನ್ನು ಕೇಳಿದಾಗಲೆಲ್ಲ ನನಗೆ ಒಂದು ಕ್ಷಣ ರೋಮಾಂಚನವಾಗುತ್ತದೆ. ತಿಳಿದೋ ತಿಳಿಯದೆಯೋ ನಾನು ನನ್ನದೇ ಆದ ಪ್ರಪಂಚದಲ್ಲಿ ಮುಳುಗಿಬಿಡುತ್ತೇನೆ. ಅಲ್ಲಿ ನಾನು ಮತ್ತು ನನ್ನ ತಂದೆಯ ಹೊರತು ಬೇರೆ ಯಾರೂ ಇಲ್ಲ. ಜಗತ್ತಿನ ತುಂಬಾ ಅಪರಿಚಿತರೇ ತುಂಬಿರುವಾಗ ನನ್ನ ಸ್ವಂತದ್ದು ಎಂದು ಹೆಮ್ಮೆಯಿಂದ ಹೇಳಿಕೊಳ್ಳ ಬಹುದಾದ ಒಂದು ಜೀವ ಅಂದರೆ ಅಪ್ಪ. ಪ್ರತಿಯೊಬ್ಬ ತಂದೆಯೂ ಕೂಡ ಮಕ್ಕಳ ಭವಿಷ್ಯಕ್ಕಾಗಿ ತನ್ನನ್ನು ಎಷ್ಟರ ಮಟ್ಟಿಗೆ ಮಾರ್ಪಾಡು ಮಾಡಲು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತಾರೆ. ಪ್ರೀತಿ ಎಂಬ ಎರಡಕ್ಷರಕ್ಕೆ ಇಂದು ಜಗತ್ತು ಬೇರೆ ಬೇರೆ ಹೆಸರನ್ನು ಕೊಟ್ಟಿರಬಹುದು. ಆದರೆ, ಪ್ರೀತಿ ಎಂದರೆ ನನ್ನ ಪ್ರಕಾರ ನನ್ನ ತಂದೆ. ಏಕೆಂದರೆ ನಾ ಕಂಡ ಪ್ರಕಾರ ನನ್ನ ತಂದೆಯ ಪ್ರೀತಿ ಕೇವಲ ತೋರಿಕೆಯದಾಗಿರಲಿಲ್ಲ. ಹಾಗೆಂದು ಅದನ್ನು ವರ್ಣಿಸಲೂ ಕೂಡ ಸಾಧ್ಯವಿಲ್ಲ. ಅಂಥ ಮಹತ್ವದ್ದು ತಂದೆ-ಮಗಳ ಬಾಂಧವ್ಯ.
ನಾನು ಒಬ್ಬಳು ಹೆಣ್ಣು ಮಗಳಾಗಿ ಹೆಮ್ಮೆಯಿಂದ ಹೇಳಬಲ್ಲೆ, ಮೈ ಡ್ಯಾಡ್ ಇಸ್ ಮೈ ಹೀರೋ. ಹೌದು, ನಾವು ಸಿನೆಮಾದಲ್ಲಿ ನೋಡುವ ಹೀರೋ ಸಿನಿಮಾಗೆ ಮಾತ್ರ ಮೀಸಲು. ಆದರೆ ವಾಸ್ತವ ಬೇರೆಯೇ ಆಗಿರುತ್ತದೆ. ಒಬ್ಬ ತಂದೆ ಜೀವನದಲ್ಲಿ ತನ್ನ ಮಕ್ಕಳಿಗೆ ಬರುವಂತಹ ಕಷ್ಟಗಳನ್ನೆಲ್ಲ ಅಡ್ಡಗಟ್ಟಿ ಬೆಳೆಸುತ್ತಾನೆ. ಸದಾ ಅವರ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಾನೆ.
ಇದೇ ಅಲ್ಲವೇ ಪ್ರೀತಿ ಎಂದರೆ. ಇದು ಕೇವಲ ನನ್ನೊಬ್ಬಳ ಅನುಭವವಲ್ಲ. ಪ್ರತಿ ಮನೆಯಲ್ಲೂ ಅಪ್ಪನ ಪಾತ್ರ ಮಹತ್ವದ್ದು. ಎಷ್ಟೇ ಸಮಸ್ಯೆಗಳಿದ್ದರೂ ತೋರ್ಪಡಿಸಿಕೊಳ್ಳದೆ, ತನ್ನ ಮಕ್ಕಳ ಮುಂದೆ ನಗುಮುಖದ ಪರಿಚಯವನ್ನು ಮಾತ್ರ ತೋರಿಸುತ್ತಾನೆ. ಹೌದು, ಇದೇ ಪ್ರೀತಿ. ತಂದೆಯ ಪ್ರೀತಿ ಎಂಬುದು ಬೆಲೆ ಕಟ್ಟಲಾಗದ ಮಾಣಿಕ್ಯ. ತನ್ನ ಇಷ್ಟಗಳನ್ನು, ಆಸೆಗಳನ್ನು ಬದಿಗೊತ್ತಿ ತನ್ನ ಮನೆ, ಮಕ್ಕಳು, ಕುಟುಂಬಕ್ಕಾಗಿ ದುಡಿಯುವ ಎಲ್ಲರ ತಂದೆ ಯಂದಿರೂ ಗ್ರೇಟ್ !
“ಅಪ್ಪಾ ಐ ಲವ್ ಯೂ!’.
ರಕ್ಷಿತಾ ರಮೇಶ
ಬಿಎಸ್‌ಸಿ ವಿದ್ಯಾರ್ಥಿನಿ,
ಭಂಡಾರ್‌ಕಾರ್ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜು, ಕುಂದಾಪುರ