ಚಿತ್ರದುರ್ಗ: ಕರ್ನಾಟಕ ಮೃಗಾಲಯ ಪ್ರಾಧಿಕಾರ ಹೊರತಂದಿರುವ ಪ್ರಾಣಿಗಳ ದತ್ತು ಸ್ವೀಕಾರದ ಆ್ಯಪ್‌ನ್ನು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಜಿಪಂ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, Zak ಆ್ಯಪ್ ಮೂಲಕ ಮೃಗಾಲಯ ವೀಕ್ಷಣೆಗೆ ಅನ್‌ಲೈನ್ ಟಿಕೆಟ್ ವ್ಯವಸ್ಥೆ ಹಾಗೂ ಪ್ರಾಣಿಗಳ ದತ್ತು ಸ್ವೀಕಾರ ಮತ್ತು ಮೃಗಾಲಯಕ್ಕೆ ದೇಣಿಗೆ ನೀಡುವವರಿಗೆ ಈ ಆ್ಯಪ್ ಸಹಕಾರಿಯಾಗಿದೆ ಎಂದರು.
ಮೃಗಾಲಯದ ಅಭಿವೃದ್ಧಿಗಾಗಿ ದೇಶದ ವಿವಿಧ ಭಾಗದಲ್ಲಿರುವ ಜನ ವೀಕ್ಷಣೆ, ಟಿಕೆಟ್ ಕಾಯ್ದಿರಿಸುವಿಕೆ, ದೇಣಿಗೆ ನೀಡಬಹುದು. ಚಿತ್ರದುರ್ಗದಲ್ಲಿನ ಮೃಗಾಲಯ ಅಭಿವೃದ್ಧಿಗೆ ದೇಣಿಗೆ ನೀಡುವವರು ಹಾಗೂ ಪ್ರಾಣಿಗಳ ದತ್ತು ಸ್ವೀಕಾರ ಪಡೆಯುವವರಿಗೆ ಈ ಆ್ಯಪ್ ಸಹಕಾರಿಯಾಗಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ನಾಯ್ಕ ಮಾತನಾಡಿ, ಮೃಗಾಲಯ ವೀಕ್ಷಣೆಗೆ ಬರುವ ಸಾರ್ವಜನಿಕರ ಹಿತ ದೃಷ್ಟಿಯಿಂದ ಕೋವಿಡ್ ಮುಂಜಾಗ್ರತಾ ಕಾಪಾಡುವ ಸಲುವಾಗಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲುವ ಬದಲು ಆ್ಯಪ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಿ ನೇರ ಪ್ರವೇಶ ಪಡೆಯಬಹುದು.
ಮೃಗಾಲಯಕ್ಕೆ ಭೇಟಿ ನೀಡುವ ಪ್ರಾಣಿ ಪ್ರಿಯರು ಪ್ರಾಣಿಗಳನ್ನು ದತ್ತು ಸ್ವೀಕಾರ ಮಾಡಲು ಈ ಅಪ್ಲಿಕೇಷನ್ ಸಹಕಾರಿಯಾಗಿದೆ. ಮೃಗಾಲಯಕ್ಕೆ ದೇಣಿಗೆ ನೀಡುವ ಎಲ್ಲಾ ಸಾರ್ವಜನಿಕರು ಈ ಆ್ಯಪ್ ಬಳಸಿ ಮೃಗಾಲಯವನ್ನು ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ಮಾತನಾಡಿ ಕೋವಿಡ್‌ನಿಂದ ಮೃಗಾಲಯದ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ವಿರಳವಾಗಿದ್ದು, ಮೃಗಾಲಯ ನಿರ್ವಹಣೆ ವೆಚ್ಚ ಹೆಚ್ಚಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಪ್ರತಿ ದಿನ ಪ್ರಾಣಿಗಳಿಗೆ ಆಹಾರ ನೀಡಲು 1 ರಿಂದ 2 ಲಕ್ಷದ ವರೆಗೆ ಖರ್ಚು ಬರುತ್ತದೆ. ಹೊಸ ಪ್ರಾಣಿಗಳನ್ನು ತರಲು ತೊಂದರೆ ಆಗಿದೆ. ಹಾಗಾಗಿ ಪ್ರಾಣಿ ಪ್ರಿಯರು ಪ್ರಾಣಿಗಳ ದತ್ತು ಸ್ವೀಕಾರ ಮಾಡಬಹುದು ಹಾಗೂ ದೇಣಿಗೆ ನೀಡಬಹುದು ಎಂದು ಹೇಳಿದರು.
ಜಿಪಂ ಸಿಇಒ ಟಿ.ಯೊಗೇಶ್, ವಲಯ ಅರಣ್ಯಾಧಿಕಾರಿ ವಸಂತ್ ಕುಮಾರ್ ಉಪಸ್ಥಿತರಿದ್ದರು.