ಬೆಂಗಳೂರು: 2013-14ನೇ ಸಾಲಿನ 197 ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವ ಹಾಲಿ ಸೇವೆಯಲ್ಲಿರುವ 61 ಮಂದಿ ಎಪಿಪಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
ಈ ಕುರಿತಂತೆ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಹಾಗೂ ವಕೀಲೆ ಸುಧಾ ಕಟವಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಹಾಗೂ ನ್ಯಾ. ಎಚ್.ಟಿ. ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ಈ ನಿರ್ದೇಶನ ನೀಡಿ ವಿಚಾರಣೆಯನ್ನು ಜು.31ಕ್ಕೆ ಮುಂದೂಡಿತು.
ಅರ್ಜಿ ವಿಚಾರಣೆ ವೇಳೆ, ಜಾರ್ಜ್‌ಶೀಟ್ ಸಲ್ಲಿಕೆಯಾಗಿರುವ 61 ಮಂದಿ ಎಪಿಪಿಗಳು ಸೇವೆಯಲ್ಲಿ ಮುಂದುವರಿದಿರುವುದು ಹೇಗೆ? ಅವರ ವಿರುದ್ಧದ ಆರೋಪಗಳು ಸತ್ಯವಲ್ಲದಿರಬಹುದು. ಆದರೆ, ಸರ್ಕಾರ ಈ ಬಗ್ಗೆ ಏನಾದರೂ ಕ್ರಮ ಕೈಗೊಳ್ಳಬೇಕಲ್ಲವೇ? ಇದೊಂದು ತನಿಖೆಗೊಳಪಡಬೇಕಾದ ವಿಷಯ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ, ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಜಾರ್ಜ್‌ಶೀಟ್‌ನಲ್ಲಿ ಆರೋಪಿತರಾಗಿರುವ 61 ಮಂದಿ ಎಪಿಪಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಬಗ್ಗೆ ಮುಂದಿನ ವಿಚಾರಣೆ ವೇಳೆಗೆ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಸ್. ಉಮಾಪತಿ, 197 ಎಪಿಪಿಗಳ ನೇಮಕಾತಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿದೆ. ಹೈಕೋರ್ಟ್ ನ್ಯಾಯಮೂರ್ತಿಗಳ ಸಹಿಗಳನ್ನು ನಕಲು ಮಾಡಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಆಯ್ಕೆ ಸಮಿತಿಯೊಂದಿಗೆ ಸೇರಿ ವಂಚನೆ, ದುರಾಚಾರ, ಮೋಸ ಸೇರಿ ಅಪರಾಧಿಕ ಪಿತೂರಿ ನಡೆಸಿದ್ದಾರೆ.
ನೇಮಕಾತಿಯಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ನಡೆದಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಅಕ್ರಮ ನೇಮಕಾತಿಯಿಂದ ಅರ್ಹ ಅಭ್ಯರ್ಥಿಗಳು ಅವಕಾಶ ವಂಚಿತರಾಗಿದ್ದಾರೆ. 61 ಎಪಿಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದರೂ ಅವರು ಸೇವೆಯಲ್ಲಿ ಮುಂದುವರಿದ್ದಾರೆ.
ಹಾಗಾಗಿ, 2014ರ ಫೆ.22ರಂದು ಪ್ರಕಟಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ರದ್ದುಪಡಿಸಬೇಕು. ಎಪಿಪಿಗಳು ಸೇವೆಯಲ್ಲಿ ಮುಂದುವರಿಯದಂತೆ ತಡೆಯಲು ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯ ಅಭಿಯೋಜನಾ ಇಲಾಖೆ 197 ಎಪಿಪಿಗಳ ನೇಮಕಾತಿಗೆ 2012. ಮೇ 16ರಂದು ಅಧಿಸೂಚನೆ ಹೊರಡಿಸಿತ್ತು. 2013ರ ಜೂ.16ರಂದು ಪೂರ್ವಭಾವಿ ಹಾಗೂ ಆ.31 ಹಾಗೂ ಸೆ.1ರಂದು ಮುಖ್ಯ ಪರೀಕ್ಷೆ ನಡೆದು, 2014ರ ಜ.30 ಹಾಗೂ ಫೆ.10ರಂದು ಸಂದರ್ಶನ ನಡೆದು, ಫೆ.22ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು.
ಬಳಿಕ ಎಲ್ಲರಿಗೂ ನೇಮಕಾತಿ ಪತ್ರ ಸಹ ನೀಡಲಾಗಿತ್ತು. ಈ ಮಧ್ಯೆ ನೇಮಕಾತಿಯಲ್ಲಿ ಅಕ್ರಮ ನಡೆದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ 2018ರ ಮಾ.15ರಂದು 61 ಮಂದಿ ಎಪಿಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು.