Advertisement

ವಿದ್ಯಾರ್ಥಿಗಳಿಗೋಸ್ಕರ ಆ್ಯಪ್‌ ಅಭಿವೃದ್ಧಿ

10:23 AM Sep 13, 2019 | Team Udayavani |

ಹುಬ್ಬಳ್ಳಿ: ಸದಾ ಮೊಬೈಲ್ನಲ್ಲಿಯೇ ಮುಳುಗಿರುವ ಯುವ ಸಮುದಾಯದವರು ಸಮಯ ಹಾಳು ಮಾಡುತ್ತಾರೆ ಎಂಬುದು ಹೆಚ್ಚಿನವರ ಅನಿಸಿಕೆ. ಆದರೆ ಪ್ರತಿಭಾವಂತ ಯುವಕರಿಬ್ಬರು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

Advertisement

ಕೆಎಲ್ಇ ಸಂಸ್ಥೆಯ ಚನ್ನಬಸಮ್ಮ ಈಶ್ವರಪ್ಪ ಮುನವಳ್ಳಿ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಡಿಪ್ಲೊಮಾ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗುವ 4 ಮೊಬೈಲ್ ಅಪ್ಲಿಕೇಶನ್‌ಗಳನ್ನು (ಆ್ಯಪ್‌) ಅಭಿವೃದ್ಧಿಪಡಿಸಿದ್ದಾರೆ. ಸಿವಿಲ್ ವಿಭಾಗದ 5ನೇ ಸೆಮಿಸ್ಟರ್‌ ವಿದ್ಯಾರ್ಥಿಗಳಾದ ಮಾರುತಿ ಬದ್ದಿ ಹಾಗೂ ವಿನಾಯಕ ಜಡಿ ರಜಾ ದಿನಗಳ ಸಮಯದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಮಾಡಿದ್ದಾರೆ. ಡಿಪ್ಲೊಮಾ ಸಿಲೇಬಸ್‌, ಡಿಪ್ಲೊಮಾ ಕ್ವಶ್ಚನ್‌ ಪೇಪರ್‌, ಡಿಪ್ಲೊಮಾ ಸಿಇಟಿ ಹಾಗೂ ಡಿಪ್ಲೊಮಾ ಫಲಿತಾಂಶ ಅಪ್ಲಿಕೇಶನ್‌ಗಳನ್ನು ರೂಪಿಸಿದ್ದಾರೆ.

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆ ಮಾಡುವಾಗ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಹುಡುಕುವುದು ಸವಾಲಿನ ಕೆಲಸ. ಹಳೆಯ ಪ್ರಶ್ನೆಪತ್ರಿಕೆಗಳು ಲಭಿಸಿದರೆ ಸಿದ್ಧತೆಗೆ ಪೂರಕವಾಗುತ್ತದೆ. ವಿದ್ಯಾರ್ಥಿಗಳ ಸಮಸ್ಯೆಯನ್ನು ಮನಗಂಡು ಅಪ್ಲಿಕೇಶನ್‌ ಸಿದ್ಧಪಡಿಸಿದ್ದಾರೆ. ಇದರಲ್ಲಿ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಪ್‌ಲೋಡ್‌ ಮಾಡಿದ್ದರಿಂದ ವಿದ್ಯಾರ್ಥಿಗಳು ತಮಗೆ ಬೇಕಾದ ಪ್ರಶ್ನೆಪತ್ರಿಕೆ ಪಡೆದುಕೊಳ್ಳಬಹುದಾಗಿದೆ.

ಡಿಪ್ಲೊಮಾ ಮೆಕ್ಯಾನಿಕಲ್, ಅಟೋಮೊಬೈಲ್, ಕಂಪ್ಯೂಟರ್‌ ಸೈನ್ಸ್‌, ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್‌, ಇಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌, ಆರ್ಕಿಟೆಕ್ಚರ್‌ ವಿಭಾಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿಸೆಯಲ್ಲಿ ಅಪ್ಲಿಕೇಶನ್‌ ಮಾಡಲಾಗಿದೆ.

ಸಿಲೇಬಸ್‌ ಅಪ್ಲಿಕೇಶನ್‌ನಲ್ಲಿ ಪಠ್ಯಕ್ರಮ, ಥಿಯರಿ, ಪ್ರಾಕ್ಟಿಕಲ್ ಕುರಿತ ಸಮಗ್ರ ಮಾಹಿತಿಯಿದೆ. ಅದೇ ರೀತಿ ಡಿಪ್ಲೊಮಾ ಸಿಇಟಿ ಅಪ್ಲಿಕೇಶನ್‌ನಲ್ಲಿ ಸಿಇಟಿ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಳ್ಳಬಹುದು. ತಾಂತ್ರಿಕ ಶಿಕ್ಷಣ ಮಂಡಳಿಯ ವೆಬ್‌ಸೈಟ್‌ನೊಂದಿಗೆ ಲಿಂಕ್‌ ಮಾಡಿರುವುದರಿಂದ ರಿಸಲ್r ಅಪ್ಲಿಕೇಶನ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಫಲಿತಾಂಶದ ಸಂದರ್ಭದಲ್ಲಿ ವೆಬ್‌ಸೈಟ್ ನೆಟ್ವರ್ಕ್‌ ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ರಿಸಲ್r ಅಪ್ಲಿಕೇಶನ್‌ ಅನುಕೂಲವಾಗಲಿದೆ.

Advertisement

ಡಿಪ್ಲೊಮಾ ವಿದ್ಯಾರ್ಥಿಗಳ ಪಠ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಇಬ್ಬರೂ ವಿದ್ಯಾರ್ಥಿಗಳು ಚಿಂತನೆ ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದರು. ರಜಾ ಸಮಯವನ್ನು ವ್ಯರ್ಥ ಮಾಡದೇ 4 ಅಪ್ಲಿಕೇಶನ್‌ಗಳನ್ನು ಮಾಡಿದರು. ಇಬ್ಬರೂ ಸಿವಿಲ್ ವಿದ್ಯಾರ್ಥಿಗಳಾಗಿದ್ದರಿಂದ ಅಪ್ಲಿಕೇಶನ್‌ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಆರಂಭದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಿದರು. ಆದರೆ ಕಾಲೇಜಿನ ಬೋಧಕರು ಹಾಗೂ ವಿಷಯ ತಜ್ಞರ ಸಲಹೆ ಪಡೆದುಕೊಂಡು ಅಭಿವೃದ್ಧಿಪಡಿಸಿದರು.

ಡಿಪ್ಲೊಮಾ ನಂತರ ಬಿಇ ಕಲಿಯಲು ಬಯಸಿದ್ದೇನೆ. ಆದರೆ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಅಪ್ಲಿಕೇಶನ್‌ಗಳನ್ನು ಅಪ್‌ಡೇಟ್ ಮಾಡುತ್ತ ಮುಂದುವರಿಸಲಾಗುವುದು. ಆ್ಯಪ್‌ ಉಚಿತವಾಗಿದ್ದು, ಅಪ್ಲಿಕೇಶನ್‌ ಬಳಸುತ್ತಿರುವ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.•ಮಾರುತಿ ಬದ್ದಿ , ಆ್ಯಪ್‌ ಅಭಿವೃದ್ಧಿಪಡಿಸಿದ ವಿದ್ಯಾರ್ಥಿ

ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ, ಪಠ್ಯಕ್ರಮ, ಫಲಿತಾಂಶ ಕುರಿತ ಅಪ್ಲಿಕೇಶನ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಮಾರುತಿ ಹಾಗೂ ವಿನಾಯಕ ಅಭ್ಯಾಸದಲ್ಲಿಯೂ ಮುಂದಿದ್ದು, ಮಾರುತಿ ಬದ್ದಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಇತರ ವಿದ್ಯಾರ್ಥಿಗಳೂ ಇವರಂತೆ ಹೊಸ ಪ್ರಯೋಗಗಳಿಗೆ ಮುಂದಾಗಬೇಕು.•ಪ್ರೊ| ವೀರೇಶ ಅಂಗಡಿ, ಪ್ರಾಚಾರ್ಯ, ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್‌

ಎಲ್ಲಿ ಸಿಗುತ್ತೆ ಆ್ಯಪ್‌?:

ಸ್ಮಾರ್ಟ್‌ಫೋನ್‌ನಿಂದ ಗೂಗಲ್ ಪ್ಲೇಸ್ಟೋರ್‌ ಮೂಲಕ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಪ್ರತ್ಯೇಕವಾಗಿ diploma QP, diploma syllabus, diploma DCET, diploma results BTE Karnataka ಅಪ್ಲಿಕೇಶನ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇಲ್ಲವೇ pub:klediploma ಮೂಲಕ ಎಲ್ಲ 4 ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

 

•ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next