ಉಡುಪಿ: ಮಣಿಪಾಲ ಕೆಎಂಸಿಯ ಫಾರ್ಮಕಾಲಜಿ ವಿಭಾಗ ಮತ್ತು ಎಂಐಟಿಯ ಮಾಹಿತಿ ಮತ್ತು ಸಂವಹನ ವಿಭಾಗಗಳು ರೋಗಿಗಳ ಸುರಕ್ಷೆಗಾಗಿ ಔಷಧಗಳ ಪ್ರತಿಕೂಲ ಪರಿಣಾಮಗಳನ್ನು ವರದಿ ಮಾಡಲು ಅಭಿವೃದ್ಧಿ ಪಡಿಸಿದ ಆ್ಯಂಡ್ರಾಯ್ಡ ಆ್ಯಪ್ ಅನ್ನು ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮತ್ತು ಸಹಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಬುಧವಾರ ಬಿಡುಗಡೆಗೊಳಿಸಿದರು. ಈ ಆ್ಯಪ್‌ಗೆ ADRRIA (ಅಡ್ವರ್ಸ್ ಡ್ರಗ್ ರಿಯಾಕ್ಷನ್ ರಿಪೋರ್ಟಿಂಗ್, ಐಡೆಂಟಿಫಿಕೇಶನ್ ಆ್ಯಂಡ್ ಅಸೆಸೆ¾ಂಟ್) ಎಂದು ಹೆಸರಿಡಲಾಗಿದೆ.
ಈ ವಿಶಿಷ್ಟ ಆ್ಯಪ್ ಅನ್ನು ಫಾರ್ಮಕಾಲಜಿ ವಿಭಾಗದ ಡಾ| ನವೀನ್ ಪಾಟೀಲ್ ಮತ್ತು ಡಾ| ವೀಣಾ ನಾಯಕ್ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಅಕ್ಷಯ ಎಂ.ಜೆ. ಮತ್ತು ಅರಿಫ್ ರಾಜಾ ಅಭಿವೃದ್ಧಿ ಪಡಿಸಿದ್ದಾರೆ. “ಆ್ಯಪ್ ಮಾಹೆಯ ಪ್ರತಿಷ್ಠೆಯನ್ನು ಹೆಚ್ಚಿಸಲಿದೆ. ಕೆಲವು ಸಮಯದ ಬಳಿಕ ಮಣಿಪಾಲ ಸಮೂಹದ ಮಂಗಳೂರು, ಉಡುಪಿ, ಕಾರ್ಕಳದ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು’ ಎಂದು ಡಾ| ಬಲ್ಲಾಳ್ ಹೇಳಿದರು. ಹೊಸ ಸಂಶೋಧನೆ ಮತ್ತು ಸೃಜನಶೀಲತೆಗಳು ಹೆಚ್ಚಿ ಮಾಹೆಯ ಘನತೆ ಹೆಚ್ಚುವಂತಾಗಲಿ ಎಂದು ಡಾ| ಪೂರ್ಣಿಮಾ ಬಾಳಿಗಾ ಶುಭ ಹಾರೈಸಿದರು.
ಎಂಐಟಿ ಜಂಟಿ ನಿರ್ದೇಶಕ ಡಾ| ಬಿ.ಎಚ್.ವಿ. ಪೈ, ಕೆಎಂಸಿ ಡೀನ್ ಡಾ| ಶರತ್ ರಾವ್, ಆಸ್ಪತ್ರೆ ಸಿಒಒ ಸಿ.ಜಿ. ಮುತ್ತಣ, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ ಶೆಟ್ಟಿ ಉಪಸ್ಥಿತರಿದ್ದರು.
ಸಾವಿಗೂ ಕಾರಣವಾದೀತು
ಔಷಧಗಳನ್ನು ಸೇವಿಸಿದಾಗ ಆಗುವ ನೋವು ಅದರ ಪ್ರತಿಕೂಲ ಅಡ್ಡಪರಿಣಾಮ (ಎಡಿಆರ್). ಇದು ಒಂದು ಬಗೆಯ ಔಷಧ ಅಥವಾ ಸುದೀರ್ಘ ಕಾಲದಿಂದ ತೆಗೆದುಕೊಳ್ಳುವ ಔಷಧ ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಬಗೆಯ ಔಷಧಗಳಿಂದ ಉಂಟಾಗುವ ನೋವು ಆಗಿರಬಹುದು. ಔಷಧಗಳ ಅಡ್ಡ ಪರಿಣಾಮವೂ ರೋಗ ಹೆಚ್ಚಳ ಮತ್ತು ಸಾವಿಗೆ ಪ್ರಮುಖ ಕಾರಣವಾಗುತ್ತದೆ ಎಂದು ಡಾ| ನವೀನ್ ಪಾಟೀಲ್ ವಿವರಿಸಿದರು.
ಫಾರ್ಮಕಾಲಜಿ ವಿಭಾಗವು ಭಾರತದ ಫಾರ್ಮ ಕೋವಿಜಿಲೆನ್ಸ್ ಕಾರ್ಯಕ್ರಮದ ಔಷಧ ಅಡ್ಡ ಪರಿಣಾಮ ನಿಯಂತ್ರಣ ಕೇಂದ್ರದ ಮಾನ್ಯತೆಯನ್ನು ಹೊಂದಿದೆ. ಔಷಧ ಪ್ರತಿಕೂಲ ಪರಿಣಾಮದ ವರದಿಯು ನಿಯಂತ್ರಣ ಪ್ರಾಧಿಕಾರದ ಪರಿಶೀಲನೆ ಬಳಿಕ ಸಿಗಲಿದೆ. ಇದು ಔಷಧಗಳ ಬಗೆಗಿನ ಎಚ್ಚರಿಕೆ ಅಥವಾ ಔಷಧಗಳನ್ನು ನಿಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಕಟನೆ ತಿಳಿಸಿದೆ.