Advertisement

ದ್ವಿಚಕ್ರ ವಾಹನ ಸಂಚಾರಕ್ಕೆ ಮಾರ್ಗ ತೆರವಿಗೆ ಆಪ್‌ ಆಗ್ರಹ

03:40 PM Jul 20, 2022 | Shwetha M |

ವಿಜಯಪುರ: ನಗರದ ಬಸವನಬಾಗೇವಾಡಿ ಮಾರ್ಗದಲ್ಲಿರುವ ಇಬ್ರಾಹಿಂಪುರ ರೈಲ್ವೆ ಗೇಟ್‌ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ವಿಳಂಬದಿಂದ ಈ ಭಾಗದ ಬಹುತೇಕ ಬಡಾವಣೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಮ್‌ ಆದ್ಮಿ ಪಕ್ಷದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದ ಆಪ್‌ ಪಕ್ಷದ ನಾಯಕರು, ವಿಜಯಪುರ ನಗರದ ಇಬ್ರಾಹಿಂಪುರ ರೈಲ್ವೆ ಗೇಟ್‌ ಮೇಲ್ಸೇತುವೆ ಕಾಮಗಾರಿ ಕಳೆದ ನಾಲ್ಕು ವರ್ಷದಿಂದ ಆಮೆಗತಿಯಲ್ಲಿ ನಡೆಯುತ್ತಿದೆ. ಇದರಿಂದ ಸ್ಥಳೀಯ ಜನರು ಅದರಲ್ಲೂ ಗಣೇಶ ನಗರ, ಶಾಂತವೀರ ನಗರ, ಇಬ್ರಾಹಿಂಪುರ, ಗಡಗಿ ಕಾಲೋನಿ, ನಂದಿನಿನಗರ, ಸನ್‌ ಸಿಟಿ ಸೇರಿದಂತೆ ವಿವಿಧ ಬಡಾವಣೆ ಜನರು ವಿಜಯಪುರ ನಗರಕ್ಕೆ ಸಂಪರ್ಕ ಪಡೆಯಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಈ ಭಾಗದ ವಿವಿಧ ಬಡಾವಣೆಗಳ ಜನರು ಪ್ರತಿನಿತ್ಯ ಬಾಗಲಕೋಟೆ ರಸ್ತೆಯ ವಜ್ರಹನುಮಾನ ಗೇಟ್‌ ಮೂಲಕ ಸುತ್ತುವರಿದು ನಗರಕ್ಕೆ ಬಂದು-ಹೋಗಲು ಅನಗತ್ಯವಾಗಿ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

ಪೆಟ್ರೋಲ್‌ ಸೇರಿದಂತೆ ಇತರೆ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಡಾವಣೆಯ ಜನಸಾಮಾನ್ಯರು ಹಲವು ಕಿ.ಮೀ ಸುತ್ತುವರಿದು ಹೋಗುವುದು ದುಸ್ಥರವಾಗಿದೆ. ಅಲ್ಲದೇ ಆಟೋ ಹಾಗೂ ಪೆಟ್ರೋಲ್‌ ವೆಚ್ಚ ಭರಿಸಲು ಕಷ್ಟವಾಗಿದ್ದು ಅನಗತ್ಯವಾಗಿ ಸುತ್ತುವರಿದು ಓಡಾಡುವುದು ಸಮಯದ ಕಾಲಹರಣಕ್ಕೂ ಕಾರಣವಾಗಿದೆ ಎಂದು ದೂರಿದರು.

ಹೀಗಾಗಿ ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ದ್ವಿಚಕ್ರ, ಆಟೋ ಓಡಾಟಕ್ಕೆ ತುರ್ತಾಗಿ ಗೇಟ್‌ ತೆರವುಗೊಳಿಸಬೇಕು. ಅಲ್ಲದೇ ಕೆಲ ವಾಹನಗಳ ಮಾರ್ಗವನ್ನು ಬದಲಾವಣೆ ಮಾಡಿ ವಜ್ರಹನುಮಾನ ರೈಲ್ವೆ ಗೇಟ್‌ ಮಾರ್ಗದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವಂತೆ ಮನವಿ ಮಾಡಿದರು.

ಆಪ್‌ ಪಕ್ಷದ ನಗರ ಉಪಾಧ್ಯಕ್ಷ ನಿಯಾದಅಹ್ಮದ್‌ ಗೋಡಿಹಾಳ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಕೆಂಗನಾಳ, ಡಾ|ಸಾಬೀರ ಮೋಮಿನ್‌, ಅಮೀನ್‌ ಸೊಹೈಲ್‌, ತನ್ವೀರ್‌ ಪೆಂಡಾರಿ, ಭಾಷಾ ಪಠಾಣ, ರೇವಣಸಿದ್ಧ ಕುಂಬಾರ, ಮಂಜು ಕುಂಬಾರ, ರಾಜಶೇಖರ ಮುಳವಾಡ, ಆರ್‌.ಎಸ್‌. ನಾಗಶೆಟ್ಟಿ, ರಾಜೇಸಾಬ ಶಿವನಗುತ್ತಿ, ಯುವರಾಜ ಚೋಳಕೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next