ಹೊಸದಿಲ್ಲಿ: ಸಾಮಾಜಿಕ ಜಾಲತಾಣ ದೈತ್ಯ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್ ನೀಡಲು ಮುಂದಾಗಿದೆ. 2024ರ ಭಾರತದ ಲೋಕಸಭಾ ಚುನಾವಣೆಯ ಬಗ್ಗೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕನ್‌ಬರ್ಗ್ (Mark Zuckerberg) ನೀಡಿದ ಹೇಳಿಕೆಯ ವಿರುದ್ದ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್ ನೀಡುತ್ತಿದೆ.
ತಪ್ಪು ಮಾಹಿತಿ ಹರಡಿದ ಆಧಾರದ ಮೇಲೆ ಮೆಟಾ ಕಂಪನಿಗೆ ಸಮನ್ಸ್ ಜಾರಿ ಮಾಡಲಾಗುವುದು ಎಂದು ಬಿಜೆಪಿ ಸಂಸದ ಮತ್ತು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸದನ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ ಹೇಳಿದ್ದಾರೆ.
“ಪ್ರಜಾಸತಾತ್ಮಕ ದೇಶದ ಘನತೆಯನ್ನು ತಪ್ಪು ಮಾಹಿತಿ ಹರಡುವ ಮೂಲಕ ನಿಂದಿಸಲಾಗುತ್ತಿದೆ. ಈ ತಪ್ಪಿಗಾಗಿ ಸಂಸ್ಥೆಯು ಸಂಸತ್ತಿನಲ್ಲಿ ಮತ್ತು ಇಲ್ಲಿನ ಜನರಲ್ಲಿ ಕ್ಷಮೆಯಾಚಿಸಬೇಕು” ಎಂದು ದುಬೆ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಜನವರಿ 10ರಂದು ಪಾಡ್ ಕಾಸ್ಟ್ ನಲ್ಲಿ ಮಾತನಾಡಿದ ಮಾರ್ಕ್ ಜುಕನ್‌ಬರ್ಗ್, ಕೋವಿಡ್ ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಅಧಿಕಾರದಲ್ಲಿರುವ ಸರ್ಕಾರಗಳ ಮೇಲಿನ ನಂಬಿಕೆಯನ್ನು ಕುಗ್ಗಿಸಿದೆ ಎಂದಿದ್ದರು.
ಈ ಸಂಬಂಧ ಅವರು ಭಾರತದ ಉದಾಹರಣೆಯನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ. “2024 ಪ್ರಪಂಚದಾದ್ಯಂತ ಬಹಳ ದೊಡ್ಡ ಚುನಾವಣಾ ವರ್ಷವಾಗಿತ್ತು. ಭಾರತ ಸೇರಿ ಹಲವು ದೇಶಗಳು ಚುನಾವಣೆಗಳನ್ನು ಹೊಂದಿದ್ದವು. ಅಧಿಕಾರದಲ್ಲಿರುವವರು ಪ್ರತಿಯೊಂದು ಕಡೆಯೂ ಸೋತರು. ಒಂದು ರೀತಿಯ ಜಾಗತಿಕ ವಿದ್ಯಮಾನವಿದೆ; ಅದು ಹಣದುಬ್ಬರ ಅಥವಾ ಕೋವಿಡ್ ಅನ್ನು ಎದುರಿಸಲು ಆರ್ಥಿಕ ನೀತಿಗಳು ಅಥವಾ ಸರ್ಕಾರಗಳು ಕೋವಿಡ್ ಅನ್ನು ಹೇಗೆ ನಿಭಾಯಿಸಿದವು ಎಂಬ ಕಾರಣದಿಂದಾಗಿರಬಹುದು. ಇದು ಜಾಗತಿಕವಾಗಿ ಈ ಪರಿಣಾಮವನ್ನು ಬೀರಿದೆ ಎಂದು ತೋರುತ್ತದೆ,” ಎಂದು ಜುಕನ್‌ಬರ್ಗ್ ಹೇಳಿದರು.
ಇದಾದ ಸ್ವಲ್ಪ ಸಮಯದ ನಂತರ, ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರು ಜುಕರ್‌ಬರ್ಗ್ ಅವರ ಹೇಳಿಕೆಯನ್ನು ಸತ್ಯಾಂಶ ಪರಿಶೀಲಿಸಿದರು. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಭಾರತದ ಜನರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೇಲಿನ ನಂಬಿಕೆಯನ್ನು ಪುನರುಚ್ಚರಿಸಿದ್ದಾರೆ ಎಂದು ಹೇಳಿದ್ದರು.