ಹೊಸದಿಲ್ಲಿ: ಅಲೋಪಥಿ ಔಷಧಗಳ ಕುರಿತಾಗಿ ನೀವು ಪ್ರಕಟಿಸಿದ್ದ ಜಾಹೀರಾತಿನ ಗಾತ್ರದಲ್ಲೇ ಕ್ಷಮಾಪಣೆ ಯನ್ನು ಸಹ ಪ್ರಕಟಿಸಿ ಎಂದು ಸುಪ್ರೀಂ ಕೋರ್ಟ್ ಪತಂಜಲಿ ಸಂಸ್ಥೆಗೆ ಮಂಗಳವಾರ ಸೂಚಿಸಿದೆ.
ಪತಂಜಲಿ ಜಾಹೀರಾತಿನ ವಿರುದ್ಧ ಭಾರತೀಯ ವೈದ್ಯಕೀಯ ಸಂಸ್ಥೆಯು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ಸೂಚನೆ ನೀಡಿದೆ. ಎ.16ರಂದು ಈ ಮೊದಲು ಅರ್ಜಿಯ ವಿಚಾರಣೆ ನಡೆಸಿದ್ದ ಪೀಠ ಅಲೋಪಥಿ ಚಿಕಿತ್ಸಾ ಪದ್ಧತಿಯನ್ನು ಅವಹೇಳನ ಮಾಡಿದ್ದಕ್ಕೆ ಕ್ಷಮೆ ಕೋರಿ 1 ವಾರದೊಳಗೆ ಕೋರ್ಟ್‌ಗೆ ತಿಳಿಸಬೇಕು ಎಂದು ಖಡಕ್ ಆಗಿ ಸೂಚಿಸಿತ್ತು.
ಮಂಗಳವಾರ ಈ ಮಾಹಿತಿಯನ್ನು ಪತಂಜಲಿ ಪರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಮುಕುಲ್ ರೋಹrಗಿ, ಕಂಪೆನಿ ಈಗಾಗಲೇ 10 ಲಕ್ಷ ರೂ. ವೆಚ್ಚ ಮಾಡಿ 67 ಪತ್ರಿಕೆಗಳಲ್ಲಿ ಕ್ಷಮಾ ಪಣೆ ಜಾಹೀರಾತು ಪ್ರಕಟಿಸಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ|ಕೊಹ್ಲಿ, ಇದು ಕೋರ್ಟ್‌ನ ಸಮಸ್ಯೆಯಲ್ಲ. ಮತ್ತೂಮ್ಮೆ ದೊಡ್ಡ ಗಾತ್ರದಲ್ಲಿ ಜಾಹೀರಾತು ಪ್ರಕಟಿಸಿ. ಜಾಹೀರಾತನ್ನು ಮೈಕ್ರೋಸ್ಕೋಪ್ ಬಳಸಿ ನಾವು ನೋಡುವಂತಾಗ ಬಾರದು. ಜಾಹೀರಾತುಗಳನ್ನು ದೊಡ್ಡದು ಮಾಡಿ ನಮಗೆ ಸಲ್ಲಿಸಬೇಡಿ, ಪ್ರಕಟವಾದ ಜಾಹೀರಾತನ್ನು ಕಟ್‌ಔಟ್ ಮಾಡಿ ಸಲ್ಲಿಸಿ. ಇಷ್ಟು ಮಾತ್ರಕ್ಕೆ ವಿಚಾರಣೆಯಿಂದ ಮುಕ್ತವಾದೆವು ಎಂದು ಭಾವಿಸಬೇಡಿ ಎಂದು ಎಚ್ಚರಿಕೆ ನೀಡಿತು. ಅಲ್ಲದೇ ಎ.30ಕ್ಕೆ ವಿಚಾರಣೆ ಮುಂದೂಡಿತು.
ನಿಯಮ ತೆಗೆದದ್ದೇಕೆ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಔಷಧಗಳಿಗೆ ಅದ್ಭುತ ಶಕ್ತಿ ಇದೆ ಎಂಬಂತೆ ಬಿಂಬಿಸುವ ಜಾಹೀರಾತುಗಳನ್ನು ಪ್ರಕಟಿಸು ವುದಕ್ಕೆ ನಿರ್ಬಂಧ ವಿಧಿಸುವ ಭಾರತ ಔಷಧ ಕಾಯ್ದೆಯ 170ನೇ ವಿಧಿಯನ್ನು ತೆಗೆದುಹಾಕಿದ್ದು ಏಕೆ ಎಂದು ಕೋರ್ಟ್ ಕೇಂದ್ರ ಸರಕಾರಕ್ಕೆ ಪ್ರಶ್ನಿಸಿದೆ. ಈ ನಿಯಮವನ್ನು ಕೇಂದ್ರ ಕೈಬಿಟ್ಟಿತ್ತು.