Advertisement

ಮಹಿಳಾ ಉದ್ಯೋಗಕ್ಕೆ ನೆರವಾದ ಎಪಿಎಂಸಿ

10:48 AM Dec 11, 2017 | Team Udayavani |

ಕಲಬುರಗಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಂದಾಕ್ಷಣ ನಮ್ಮ ಮುಂದೆ ಸೋತು ಸುಣ್ಣವಾದ ರೈತ ಮತ್ತು ಠಾಕು ಟೀಕಾಗಿ ಓಡಾಡುವ ದಲ್ಲಾಳಿಗಳು ಮತ್ತು ಖರೀದಿದಾರರು ಕಣ್ಣ ಮುಂದೆ ಹಾಯ್ದು ಹೋಗುತ್ತಾರೆ. ಕಣ್ಣಿಗೆ ಕಾಣುವ ಈ ದೃಶ್ಯಗಳ ಮಧ್ಯೆಯೇ ಒಂದು ಅದೃಶ್ಯ ಕಥಾನಕ ಸದ್ದಿಲ್ಲದೆ ನಡೆದು ಅದೆಷ್ಟೋ ಕುಟುಂಬಗಳನ್ನು ಸಲುಹುತ್ತಿದೆ.

Advertisement

ಹೌದು! ಅವರೇ ಮಹಿಳಾ ಮಾರಾಟಗಾರರು. ಇವರದ್ದು ದೊಡ್ಡ ಬಂಡವಾಳದ ಖರೀದಿಯೂ ಅಲ್ಲ ಮತ್ತು ಇವರು ರೈತರಿಗೆ ನೇರವಾಗಿ ನೆರವು ಆಗುವುದಿಲ್ಲ. ಆದರೂ ಮಾರುಕಟ್ಟೆಯ ಶೇ. 10ರಷ್ಟು ವ್ಯವಹಾರದಲ್ಲಿ ಇವರ ಪಾತ್ರ ಗಣ್ಯ. ಆದರೆ, ಎಪಿಎಂಸಿ ವ್ಯವಹಾರ ಎಂದಾಗ ಇವರೆಲ್ಲ ನಗಣ್ಯ. ಸಗಟು ವ್ಯವಹಾರದ ಮಧ್ಯೆ ಚಿಲ್ಲರೆ ವ್ಯಾಪಾರಸ್ಥರಾಗಿ ಕಾಣಿಸಿಕೊಂಡು ಬದುಕು ಸವೆಸುವ ಛಲಗಾತಿ ಮತ್ತು ದಿಟ್ಟ ವ್ಯವಹಾರಿಕ ಕುಶಲತೆ ಇರುವ ಅನಕ್ಷರಸ್ಥ ಮಹಿಳೆಯರ
ಯಶೋಗಾಥೆ ಇದು. ಎಪಿಎಂಸಿಯ ದೊಡ್ಡ ವ್ಯವಾಹರಗಳ ಮತ್ತು ಬೋಲ್ತಿಗಳ (ಸವಾಲಿನ ಕೂಗು) ಮಧ್ಯೆ ಇವರ ವ್ಯಾಪಾರ ತುಂಬಾ ನಗಣ್ಯ. ಆದರೆ, ಸಣ್ಣ ವ್ಯಾಪಾರವಾದರೂ ಕುಟುಂಬವನ್ನು ಹೊರೆಯುವ ಇವರ ಆರ್ಥಿಕ ಸ್ವಾವಲಂಬನೆ ಮತ್ತು ಅಕ್ಷರವಿಲ್ಲದೆ ಇದ್ದರೂ ಬದಕನ್ನು ಕಟ್ಟಿಕೊಂಡ ರೀತಿ ಮಾತ್ರ ಅಕ್ಷರಸ್ಥ ಮಹಿಳೆಯರಿಗೂ ಹಾಗೂ ಎಪಿಎಂಸಿಯನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ವ್ಯವಹಾರ ನಡೆಸುವ ದಲ್ಲಾಳಿಗಳಿಗಳ ಮಧ್ಯೆ ಇವರು ಮಾದರಿಯಾಗಿ ನಿಲ್ಲುತ್ತಾರೆ. 

ಏನಿವರ ವ್ಯಾಪಾರ: ಸುಮಾರು 20ರಿಂದ 30 ಮಹಿಳೆಯರು ತಂಡಗಳು ಎಪಿಎಂಸಿ ಮಾರುಕಟ್ಟೆಯಲ್ಲಿ ಚುಮುಚುಮು ಚಳಿಯಲ್ಲಿ ಕಾಣಿಸಿಕೊಳ್ಳುತ್ತವೆ. ಕಲಬುರಗಿ ನೂತನ ಎಪಿಎಂಸಿ ಮಾರುಕಟ್ಟೆ ಪ್ರದೇಶದಲ್ಲಿ ನಡೆಯುವ ಹಣ್ಣಿನ ಹರಾಜಿನಲ್ಲಿ ಇವರೂ ಪಾಲ್ಗೊಳ್ಳುತ್ತಾರೆ. ಟನ್ನುಗಟ್ಟಲೇ ಖರೀದಿ ಮಾಡದೇ ಇದ್ದರೂ, ತಮ್ಮ ಆರ್ಥಿಕ ಸಾಮರ್ಥ್ಯ ಅವಲಂಬಿಸಿ ಒಂದೋ.. ಎರಡೋ ಟ್ರೇಗಳನ್ನು ಖರೀದಿಸುತ್ತಾರೆ. ಉದಾಹರಣೆಗೆ ದಾಳಿಂಬೆ, ಪೇರಲ, ಸೇಬು,
ಮೆಕ್ಕೆಜೋಳ, ಕಡಲೆಕಾಯಿ ಹೀಗೆ ಹಲವು. ಖರೀದಿ ಮಾಡಿದ್ದನ್ನೂ ಅಷ್ಟು 30 ಮಹಿಳೆಯರು ಹಣ್ಣಿನ ಗುಣಮಟ್ಟ ಆಧರಿಸಿ ಹಂಚಿಕೊಳ್ಳುತ್ತಾರೆ. ಪ್ರತಿಯೊಂದನ್ನು ಹಂಚಿಕೊಂಡ ಬಳಿಕ ಬುಟ್ಟಿಗಳಲ್ಲಿ ತುಂಬಿಕೊಳ್ಳುತ್ತಾರೆ. ನಂತರ ಚಿಲ್ಲರೆ ಮಾರಾಟ ದರವನ್ನು ನಿಗದಿ ಮಾಡಿಕೊಳ್ಳಲಾಗುತ್ತದೆ. ಬಳಿಕ ಸೂರ್ಯ ನೆತ್ತಿಗೇರುವ ಹೊತ್ತಿಗೆ ಒಬ್ಬೊಬ್ಬರಾಗಿ ಅಲ್ಲಿಂದ ಹೊರಟು ನಿಲ್ಲುತ್ತಾರೆ.

 ಹರಾಜಿನಲ್ಲಿ 200ರೂ.ಗೆ ಒಂದು ಟ್ರೇ ಖರೀದಿ ಮಾಡುವ ಇವರು ಚಿಲ್ಲರೆಯಾಗಿ ಮಾರಾಟ ಮಾಡಿದಾಗ ಅದರ ಮೂರು ಪಟ್ಟು ಮಾರಾಟ ಮಾಡುತ್ತಾರೆ. ಮೂರ್‍ನಾಲ್ಕು ವಿಧದ ಹಣ್ಣುಗಳನ್ನು ಮಾರಾಟ ಮಾಡುವುದರಿಂದ ದಿನವೊಂದಕ್ಕೆ 300ರಿಂದ 400ರೂ.ವರೆಗೆ ಲಾಭ ಮಾಡಿಕೊಂಡು ಮನೆ ಸೇರುತ್ತಾರೆ. 

ನಿರುದ್ಯೋಗಕ್ಕೆ ಸಡ್ಡು : ಇದು ಮಹಿಳಾ ನಿರುದ್ಯೋಗಿಗಳಿಗೆ ಮೇಲ್ನೋಟಕ್ಕೆ ಕಷ್ಟದಾಯಕ ಎನ್ನಿಸಿದರೂ ತುಂಬಾ ಲಾಭ ಇರುವ ಉದ್ಯೋಗವಾಗಿ ಪರಿಣಮಿಸಿದೆ. ರಾತ್ರಿ ಮಾಡುವ ಅಡುಗೆಯನ್ನೇ ಬುತ್ತಿಯನ್ನಾಗಿಸಿಕೊಂಡು ಬೆಳಗಿನ ಚಳಿಯಲ್ಲಿ ಎಪಿಎಂಸಿ ಪ್ರಾರಾಂಗಣಕ್ಕೆ ಬರುವವರೆಗೆ ಇವತ್ತು ಯಾವ ಹಣ್ಣು ಮಾರಾಟ ಮಾಡುತ್ತೇನೆ ಎನ್ನುವ ನಿರ್ಧಾರ ಇರುವುದಿಲ್ಲ. ಹರಾಜಿನಲ್ಲಿ ಕೈಗೆಟಕುವ ದರಕ್ಕೆ ಲಭ್ಯವಾಗುವ ಹಣ್ಣನ್ನು ಖರೀದಿ ಮಾಡಿದಾಗಲೇ ಈ ಹಣ್ಣು ಮಾರಾಟಕ್ಕೆ ಎನ್ನುವ ತೀರ್ಮಾನಕ್ಕೆ ಬರಲಾಗುತ್ತದೆ. ಚೌಕಾಸಿ, ಖರೀದಿ ಮತ್ತು ಹಣ ಜಮಾವಣೆ ಮಾಡಿ ದಲ್ಲಾಳಿಗೆ ನೀಡಿದಾಗ
ಮೊದಲ ವ್ಯವಹಾರ ಯಶಸ್ವಿ. ಬಳಿಕ ಬುತ್ತಿ ಬಿಚ್ಚಿ ಪ್ರಾಂಗಣದ ಮಧ್ಯೆಯೇ ಖುಷಿಯಿಂದ ಉಂಡು ಮಾರಾಟಕ್ಕೆ ಬುಟ್ಟಿಗಳನ್ನು ಹೊತ್ತು ನಡೆದು ಹೋಗುತ್ತಾರೆ.

Advertisement

ಇದರೊಂದಿಗೆ ತಮಗಿದ್ದ ನಿರುದ್ಯೋಗ ನಿವಾರಿಸಿಕೊಂಡಿರುವ ಈ ಮಹಿಳಾ ಮಾರಾಟಗಾರ್ತಿಯರ ಬದುಕು ಕೂಡ ಅಷ್ಟೆ ಸುಂದವಾಗಿ ರೂಪಿತಗೊಂಡಿದೆ. ಎಪಿಎಂಸಿಯಲ್ಲಿ ದೊಡ್ಡ ವ್ಯವಹಾರದ ಮಧ್ಯೆ ಸಣ್ಣದೊಂದು ಚೌಕಾಸಿ ಹಲವು
ಮಹಿಳೆಯರ ನಿರುದ್ಯೋಗವನ್ನು ನೀಗಿಸಿದೆ. ಮಕ್ಕಳ ಶೈಕ್ಷಣಿಕ ಹೊಣೆ ಹೊತ್ತಿದೆ. ಆರ್ಥಿಕ ಭದ್ರತೆ ನೀಡಿದೆ. ಆದರೆ, ದಿನವಿಡಿ ಕೆಲಸ ಮಾಡುವ ಈ ಮಹಿಳೆಯರಿಗೆ ನೆರವಾಗುವ ನಿಟ್ಟಿನಲ್ಲಿ ಎಪಿಎಂಸಿ ಏನಾದರೂ ಮಾಡಿತೇ ಎನ್ನುವುದು ಆಶಾಭಾವ.

ಮಕ್ಕಳ ಮದ್ವಿ ಮಾಡೀವಿ 
ಏನ್‌ ಮಾಡೋದ್ರಿ.. ಓದಿಲ್ಲ..ಏನ್‌ ಮಾಡಿಲ್ಲ. ಗಂಡಾನೂ ದುಡಿಬೇಕು..ನಾವೂ ದುಡಿದ್ರೇನೆ ಹೊಟ್ಟಿ ತುಂಬತಾದ್‌. ಇಲ್ಲಂದ್ರ ಭಾಳ ಕಷ್ಟಾ ಅದರ್ರಿ. ಇಂಗ್‌ ವ್ಯಾಪಾರ್‌ ಮಾಡಿ ಯಾರ್ಡ ಮಕ್ಲಿಗಿ ಮದ್ವಿ ಮಾಡೀನಿ. ಹುಡ್ಗ ಓದ್ಲಾಕತ್ತಾನ್‌..ದಿನಾ ಪೂರ್ರಾ..ಓಣ್ಯಾಗ ಒದರಕೊಂತ ಮಾರಿದ್ರ 350ರೂ. ಸಿಗತಾದ. ಇಲ್ಲಿ (ಎಪಿಎಂಸಿ) ಎಲ್ಲಾರೂ ಕೂಡಿ ಟ್ರೇ ಖರೀದಿ ಮಾಡಿ ಹಂಚಕೋತೀವಿ. ಚಿಲ್ಲರೆಯಾಗಿ ಮಾರಿ¤ವಿ. ಸುಲಗಾಯಿ (ಕಡಲೆಕಾಯಿ), ಪೇರು, ಮೊಸಂಬಿ, ದಾಳಿಂಬಿ ತಗೋತೀವಿ. ದಿನಾ ಮುಂಜಾಲಿ ಬರಿ¤ವಿ, ಹರಾಜನ್ಯಾಗ ನಿಂದ್ರತೀವಿ.. ಖರೀದಿ ಮಾಡ್ತಿವಿ. ಇಲ್ಲೆ ಉಂಡ್‌ ಮಾರ್ಲಾಕ್‌ ಹೋಗ್ತಿವಿ.
 ಲಚಮಿಬಾಯಿ, ಹನಮನಾಯಕ ತಾಂಡಾ 

ಮಹಿಳೆಯರು ಹೆಚ್ಚು: ಎಪಿಎಂಸಿ ಯಾರ್ಡ್‌ನಲ್ಲಿ ಮಹಿಳಾ ಚಿಲ್ಲರೆ ಮಾರಾಟಗಾರರು ಹೆಚ್ಚಿದ್ದಾರೆ. ಅವರದ್ದು ಸಂಘರ್ಷಮಯ ಜೀವನ. ಹರಾಜಿನ ವೇಳೆಯಲ್ಲಿ ತುಂಬಾ ಚೌಕಾಸಿ ಮಾಡಿ ಮಾಲನ್ನು ಖರೀದಿ ಮಾಡುತ್ತಾರೆ. ಬಳಿಕ ಹಂಚಿಕೊಂಡು ಚಿಲ್ಲರೆಯಾಗಿ ಮಾರಾಟ ಮಾಡಿ ಹಣ ಗಳಿಕೆ ಮಾಡುತ್ತಾರೆ. ಪ್ರಾಂಗಣದಲ್ಲಿ ಎಲ್ಲ ರೀತಿಯ ವ್ಯವಸ್ಥೆ ಇದೆ. ಎಪಿಎಂಸಿಯಲ್ಲಿ ಮಾರಾಟ, ಉದ್ಯೋಗ ಎನ್ನುವುದು ಪುರಷರಿಗೆ ಮಾತ್ರ ಸೀಮಿತವೇನಲ್ಲ.. ಮಹಿಳೆಯರು ತುಂಬಾ ಜಾಣ್ಮೆಯಿಂದ ಹಣ್ಣುಗಳನ್ನು ಖರೀದಿ ಮಾಡುತ್ತಾರೆ. ಅವರ ಕಷ್ಟದ ಜೀವನ ಇತರರಿಗೆ ಅದರಲ್ಲೂ ಕೆಲವು ಪುರಷರಿಗೂ ಮಾದರಿ. 
 ರೌಫ್‌ ಕರೀಮ್‌ ಚೌಧರಿ ಹಣ್ಣಿನ ವ್ಯಾಪಾರಿ, ಎಪಿಎಂಸಿ ಯಾರ್ಡ್‌

„ಸೂರ್ಯಕಾಂತ ಎಂ.ಜಮಾದಾರ

Advertisement

Udayavani is now on Telegram. Click here to join our channel and stay updated with the latest news.

Next