ಧಾರವಾಡ: ಶನಿವಾರ ನಡೆಯಬೇಕಿದ್ದ ಸ್ಥಳೀಯ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಕಾನೂನು ತೊಡಕಿನ ಕಾರಣ ಮುಂದೂಡಲಾಗಿದೆ.
ಎಪಿಎಂಸಿಯಲ್ಲಿ ಹಿನ್ನಡೆ ಆಗುವ ಸುಳಿವು ಪಡೆದ ಬಿಜೆಪಿಯವರು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಅವರನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಟ್ಟಿದ್ದರು. ಶ್ರೀಮೃತ್ಯುಂಜಯ ಹತ್ತಿ ಸಂಸ್ಕರಣ ಸಂಘ ನಿಯಮಿತ ಧಾರವಾಡದ ಪ್ರತಿನಿಧಿಯಾಗಿ ಅವರು ಎಪಿಎಂಸಿ ಸದಸ್ಯರಾಗಿದ್ದರು. ಆದರೆ ಸಂಘದ ನೋಂದಣಿ ನವೀಕರಣಗೊಳ್ಳದಿರುವುದನ್ನು ಮುಂದಿಟ್ಟುಕೊಂಡು ಅವರ ಮತದಾನದ ಹಕ್ಕು ಮೊಟಕುಗೊಳಿಸಿದ್ದರು.
ಸಂಘದ ಮರು ನೋಂದಣಿ ಮಾಡಿಸಿ ಕಾನೂನುಬದ್ಧವಾಗಿ ಮತದಾನದ ಹಕ್ಕು ನೀಡುವಂತೆ ಕಾಂಗ್ರೆಸ್ ಮುಖಂಡ ಹಾಗೂ ಎಪಿಎಂಸಿ ಸದಸ್ಯ ದೀಪಕ ಚಿಂಚೋರೆ ಅವರು ಈ ಕುರಿತು ಹೈಕೋರ್ಟ್ ಮೆಟ್ಟಲು ಹತ್ತಿದ್ದರು. ಇದಲ್ಲದೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಮೊಟಕುಗೊಳಿಸಿರುವ ಸರಕಾರದ ಕ್ರಮ ಪ್ರಶ್ನಿಸಿದ್ದರು.
ಈ ಸಂಬಂಧ ಪ್ರಕರಣದಲ್ಲಿ ರಾಜ್ಯ ಸರಕಾರ ಮಾರುಕಟ್ಟೆ ಕಾರ್ಯದರ್ಶಿ, ಕೃಷಿ ಮಾರಾಟ ಇಲಾಖೆ ನಿರ್ದೇಶಕರು, ಧಾರವಾಡ ಜಿಲ್ಲಾಧಿಕಾರಿ, ಧಾರವಾಡ ತಹಶೀಲ್ದಾರ್, ಧಾರವಾಡ ಎಪಿಎಂಸಿ ಕಾರ್ಯದರ್ಶಿಯನ್ನು ಪ್ರತಿವಾದಿಯಾಗಿಸಿದ್ದರು. ದೀಪಕ ಚಿಂಚೋರೆ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಅವರಿಗೆ ಚುನಾವಣೆಯಲ್ಲಿ ಭಾಗವಹಿಸಲು ಹಾಗೂ ಮತದಾನ ಮಾಡಲು ಅವಕಾಶ ಕಲ್ಪಿಸಿತ್ತು. ಅದರಂತೆ ಅವರು ಜೂ. 2ರಂದು ತಮ್ಮ ಹಕ್ಕು ಚಲಾಯಿಸಿದ್ದರು. ನಿಯಮಾವಳಿ ಪ್ರಕಾರ ಶನಿವಾರ ಧಾರವಾಡ ಎಪಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಧಾರವಾಡ ತಹಶೀಲ್ದಾರ್ ಸಂತೋಷ ಬಿರಾದಾರ ಅವರು ಮತ ಎಣಿಕೆ ಪ್ರಕ್ರಿಯೆ ಕೈಗೊಳ್ಳದೆ ಈ ಬಗ್ಗೆ ಹೈಕೋರ್ಟ್ ಮೂಲಕ ಕಾನೂನು ಸಲಹೆ ಪಡೆಯಲು ನಿರ್ಧರಿಸಿದ್ದಾರೆ. ಸೋಮವಾರ ಹೈಕೋರ್ಟ್ ಮೂಲಕ ಈ ಕುರಿತು ಸಲಹೆ ಪಡೆದು ನಂತರ ಅವರ ನಿರ್ದೇಶನದಂತೆ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.